ಶಿವಮೊಗ್ಗದಲ್ಲಿ ಇಂದಿನಿಂದ ಕೋವಿಡ್ ಬೂಸ್ಟರ್ ಡೋಸ್, ಯಾರೆಲ್ಲ ಪಡೆಯಬಹುದು, ಕೊನೆ ದಿನವೆಂದು? ಬಾಯಿ ಆರೋಗ್ಯ ಯೋಜನೆ ಪುನಾರಂಭ

 

ಸುದ್ದಿ ಕಣಜ.ಕಾಂ | DISTRICT | COVID BOOSTER DOSE
ಶಿವಮೊಗ್ಗ: ಜುಲೈ 16ರಿಂದ ಸೆಪ್ಟೆಂಬರ್ 30ರ ವರೆಗೆ ಜಿಲ್ಲೆಯ ಎಲ್ಲ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಡೋಸ್ ಲಸಿಕೆ (COVID BOOSTER DOSE) ಯನ್ನು ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆಯುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
ರಾಷ್ಟ್ರೀಯ ಬಾಯಿ ಆರೋಗ್ಯ ನೀತಿ ಕಾರ್ಯಕ್ರಮದಡಿಯಲ್ಲಿ ದಂತಭಾಗ್ಯ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಹಾಗೂ ಸ್ಥಳೀಯ ವೈದ್ಯಕೀಯ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ನಗರದ ಸಿಮ್ಸ್ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಕೊರೊನಾ ನಿಯಂತ್ರಿಸುವ ಕಾರ್ಯಕ್ರಮ ಹಾಗೂ 75ನೇ ಸ್ವಾತಂತೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಲಸಿಕೆ ನೀಡಲಾಗುತ್ತಿದೆ ಎಂದು ಹೇಳಿದರು.

READ | ವಿಶ್ವ ಹಾವುಗಳ ದಿನ ಇಂದು, ಸರ್ಪ ಜಗತ್ತಿನ ವಿಶೇಷ ಇಲ್ಲಿದೆ, ಕಡಿತ ತಪ್ಪಿಸಲು ಹೀಗೆ ಮಾಡಿ

ಸಾರ್ವಜನಿಕ ಸ್ವಾಸ್ಥ್ಯ ಮತ್ತು ವೈಯಕ್ತಿಕ ಹಿತ ಕಾಯ್ದುಕೊಳ್ಳಲು ಹಾಗೂ ಮಾರಣಾಂತಿಕ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಎಲ್ಲರೂ ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.
ಆರಂಭದ ಹಂತದಲ್ಲಿ ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ, 60+ ಮೇಲ್ಪಟ್ಟ ಹಿರಿಯ ನಾಗರೀಕರಿಗೆ, 45+ ಮೇಲ್ಪಟ್ಟವರಿಗೆ, ಅಂತೆಯೇ ಸರ್ಕಾರ ಗುರುತಿಸಿದ ಮುಂಚೂಣಿ ಕಾರ್ಯಕರ್ತರು, ಆದ್ಯತಾ ಗುಂಪುಗಳು, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಕುಟುಂಬಗಳ ಅವಲಂಬಿತರಿಗೆ ಲಸಿಕೆ ನೀಡಲಾಗಿತ್ತು. ನಂತರದಲ್ಲಿ 12-14 ವರ್ಷ ವಯೋಮಿತಿ ಮೀರಿದ ಎಲ್ಲ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಲಸಿಕೆ ನೀಡಲಾಯಿತು. ನಿರಂತರವಾದ ಈ ಎಲ್ಲ ಕಾರ್ಯಕ್ರಮಗಳಿಂದಾಗಿ ಮೊದಲ ಮತ್ತು ಎರಡನೇ ಹಂತದಲ್ಲಿ ಜಿಲ್ಲೆಯ ಅತಿಹೆಚ್ಚು ಸಂಖ್ಯೆಯ ಫಲಾನುಭವಿಗಳಿಗೆ ಲಸಿಕೆ ಹಾಕಲಾಯಿತು.
ಯಾರೆಲ್ಲ ಲಸಿಕೆ ಪಡೆಯಬಹುದು?
ರಾಜ್ಯದಲ್ಲಿ ಪುನಃ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೇಶದಲ್ಲಿ 18+ ವಯೋಮಾನದ ಎಲ್ಲರಿಗೂ ಜುಲೈ 16ರಿಂದ 75 ದಿನಗಳ ಕಾಲ ಉಚಿತವಾಗಿ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಹಾಕಲಿದೆ. ಸಾರ್ವಜನಿಕರು ಈ ಕಾರ್ಯಕ್ರಮ ಲಾಭವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

READ | ಬಾಲಕಿಯ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಬಾಯಿ ಆರೋಗ್ಯ ಯೋಜನೆ ಪುನಾರಂಭ
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದ್ದ ಬಾಯಿ ಆರೋಗ್ಯ ಯೋಜನೆಯನ್ನು ಪುನರ್ ಆರಂಭಿಸಲಾಗಿದೆ. ಇಂದಿನಿಂದ ಒಂದು ವಾರಗಳ ಕಾಲ ಆರೋಗ್ಯ ಇಲಾಖೆಯ ಸಿಬ್ಬಂದಿ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ, ಸಾರ್ವಜನಿಕರ ದಂತ ತಪಾಸಣೆ ನಡೆಸಿ, ಮುಂದಿನ 15 ದಿನಗಳೊಳಗಾಗಿ ಫಲಾನುಭವಿಗಳಿಗೆ ದಂತ ಜೋಡಣೆ ಮಾಡಲಿದೆ. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಜನರು ದಂತ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ತೆರಳುವ ಅಗತ್ಯವಿಲ್ಲ. ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ಶಿವಮೊಗ್ಗದ ಶರಾವತಿ ಹಾಗೂ ಸುಬ್ಬಯ್ಯ ದಂತವಿದ್ಯಾಲಯದ ಸಹಯೋಗ ಪಡೆಯಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಮೆಗ್ಗಾನ್ ಅಧೀಕ್ಷಕ ಡಾ. ಎಸ್.ಶ್ರೀಧರ್, ಸಿಮ್ಸ್ ಆಡಳಿತಾಧಿಕಾರಿ ಡಾ.ವೈ.ಸಿದ್ಧಪ್ಪ, ಸಿಮ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ್, ಆರ್.ಸಿ.ಎಚ್. ಅಧಿಕಾರಿ ಡಾ.ನಾಗರಾಜ್ ನಾಯ್ಕ್, ಜಿಲ್ಲಾ ಸರ್ಜನ್ ಡಾ.ಸಿದ್ಧನಗೌಡ ಸೇರಿದಂತೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗ, ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಲಸಿಕೆಯನ್ನು ಹಾಕಲಾಯಿತು.

ಶಿಶುಗಳ ಮರಣ ಪ್ರಮಾಣ ತಗ್ಗಿಸುವ ಲಸಿಕೆ ಕಾರ್ಯಕ್ಕೆ ಶಿವಮೊಗ್ಗದಲ್ಲಿ ಚಾಲನೆ, ಇದು ಸಂಪೂರ್ಣ ಉಚಿತ

Leave a Reply

Your email address will not be published.