ಯೂರಿಯಾ ರಸಗೊಬ್ಬರ ಬಳಕೆ ಬಗ್ಗೆ ಕೃಷಿ ಇಲಾಖೆ ಮಹತ್ವದ ಸೂಚನೆ

 

ಸುದ್ದಿ ಕಣಜ.ಕಾಂ | DISTRICT | AGRICULTURE NEWS
ಶಿವಮೊಗ್ಗ: ಮುಂಗಾರು ಹಂಗಾಮಿನಲ್ಲಿ ಕಳೆದ ಒಂದು ವಾರದಲ್ಲಿ ಸರಾಸರಿ 183 ಎಂಎಂ ವಾಡಿಕೆ ಮಳೆಗೆ 288 ಎಂಎಂ ಮಳೆಯಾಗಿದ್ದು ಶೇ.58ರಷ್ಟು ಹೆಚ್ಚು ಮಳೆಯಾಗಿರುತ್ತದೆ. ಪ್ರಸ್ತುತ ವಾತಾವರಣದಲ್ಲಿ ಗೊಬ್ಬರ ಬಳಕೆ ಕುರಿತು ಕೃಷಿ ಇಲಾಖೆಯಿಂದ ಕೆಳಕಂಡಂತೆ ಸಲಹೆ ನೀಡಲಾಗಿದೆ.
ಶಿಫಾರಸಿಗಿಂತ ಅಧಿಕ ರಸಗೊಬ್ಬರ ಬಳಸಿದರೆ ಕೀಟ ಬಾಧೆ
ವಿವಿಧ ಹಂತದಲ್ಲಿರುವ ಮೆಕ್ಕೆ ಜೋಳ ಬೆಳೆಗೆ ರೈತರಿಗೆ ಸಕಾಲದಲ್ಲಿ ಅಂತರ ಬೇಸಾಯ ಮತ್ತು ಯೂರಿಯಾ (urea fertilizer) ಮೇಲುಗೊಬ್ಬರ ನೀಡಲು ಸಾಧ್ಯವಾಗಿರುವುದಿಲ್ಲ. ಈ ದಿನ ಮಳೆಯ ಪ್ರಮಾಣ ತಗ್ಗಿದ್ದು ಬಿಸಿಲಿನ ವಾತಾವರಣದಿಂದ ಕೂಡಿದ್ದು, ಮೆಕ್ಕೆಜೋಳ ಬೆಳೆಗೆ ಅಂತರ ಬೇಸಾಯವನ್ನು ಮತ್ತು ಕಳೆ ತೆಗೆಯುವ ಕೆಲಸವನ್ನು ಕೈಗೊಂಡು ಮೇಲುಗೊಬ್ಬರವಾಗಿ ಯೂರಿಯಾ ರಸಗೊಬ್ಬರವನ್ನು ಪ್ರತಿ ಎಕರೆಗೆ 65 ಕೆ.ಜಿ.ಯಂತೆ ಬಳಕೆಮಾಡುವುದು. ಶಿಫಾರಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಕೆ ಮಾಡಿದರೆ ಮುಂದಿನ ದಿನಗಳಲ್ಲಿ ರೋಗ ಮತ್ತು ಕೀಟ ಬಾಧೆ ಹೆಚ್ಚಾಗುತ್ತದೆ.

READ | 20 ದಿನಗಳಲ್ಲಿ ಶೇ.78ರಷ್ಟು ಅಧಿಕ ಮಳೆ, 163 ಹಳ್ಳಿಗಳಲ್ಲಿ ಹಾನಿ, ಏನೇನು ನಷ್ಟ ಇಲ್ಲಿದೆ ಪೂರ್ಣ ಮಾಹಿತಿ 

ಬಿಸಿಲು ಮುಂದುವರಿದರೆ ಹೀಗೆ ಮಾಡಿ
ಯೂರಿಯಾ ರಸಗೊಬ್ಬರ ಜೊತೆಗೆ ಬಿಸಿಲಿನ ವಾತಾವರಣ ಮುಂದುವರಿದರೆ ನೀರಿನಲ್ಲಿ ಕರಗುವ 19:19:19 ರಸಗೊಬ್ಬರವನ್ನು ಪ್ರತಿ ಎಕರೆಗೆ 1 ಕೆ.ಜಿ.ಯಷ್ಟು 200 ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು. 25 ರಿಂದ 30 ದಿನಗಳ ಬೆಳೆಗೆ ಮತ್ತು ಹೂವಾಡುವ ಹಂತದಲ್ಲಿ ನ್ಯಾನೊ ಯೂರಿಯಾ ದ್ರವವನ್ನು ಪ್ರತಿ ಲೀಟರ್ ನೀರಿಗೆ
4 ಎಂಎಲ್ ನಂತೆ ಮತ್ತು 8 ಗ್ರಾಂ ನೀರಿನಲ್ಲಿ ಕರಗುವ ಪೊಟ್ಯಾಶ್ ಅನ್ನು ಸಿಂಪರಣೆ ಮಾಡುವುದರಿಂದ ಗಿಡಗಳು ಬೇಗನೆ ಚೇತರಿಸಿಕೊಳ್ಳುತ್ತವೆ. ಯೂರಿಯಾ ರಸಗೊಬ್ಬರವನ್ನು ಮಿತವಾಗಿ ಬಳಕೆ ಮಾಡಲು ರೈತರಿಗೆ ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ.
ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ
ಜಿಲ್ಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಯೂರಿಯ ಮತ್ತು ಇತರೆ ರಸಗೊಬ್ಬರಗಳು ಜಿಲ್ಲೆಗೆ ಪೂರೈಕೆಯಾಗುತ್ತಿದೆ. ಚಿಲ್ಲರೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಪ್ರತಿದಿನ ರೈತರಿಗೆ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರ ಕೊರತೆ ಇರುವುದಿಲ್ಲ. ಆದ್ದರಿಂದ ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ರಸಗೊಬ್ಬರವನ್ನು ನಿಗದಿಪಡಿಸಿದ ದರ ನೀಡಿ ಮತ್ತು ಅಧಿಕೃತ ಬಿಲ್’ಗಳನ್ನು ಪಡೆಯಬೇಕು.
ಕೃತಕ ಅಭಾವ ಸೃಷ್ಟಿಸಿದರೆ ಲೈಸೆನ್ಸ್ ರದ್ದು
ಜಿಲ್ಲೆಗೆ ಸರಬಾರಾಜು ಆಗುವ ರಸಗೊಬ್ಬರವು ಜಿಲ್ಲೆಯ ರೈತರಿಗೆ ಸಿಗಬೇಕು. ಕಾಳ ಸಂತೆಯಲ್ಲಿ ಮಾರಾಟ ಮಾಡುವವರ ಮತ್ತು ಕೃತಕ ಅಭಾವ ಸೃಷ್ಟಿಸುವ ಪರಿಕರ ಮಾರಾಟ ಮಳಿಗೆಗಳ ಪರವಾನಿಗೆಯನ್ನು ರದ್ದು ಮಾಡಿ ಸೂಕ್ತ ಕಾನೂನತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

ಹುಷಾರ್, ಕಳಪೆ ರಸಗೊಬ್ಬರ ಪೂರೈಸಿದರೆ ಬೀಳುತ್ತೆ‌ ಕ್ರಿಮಿ‌ನಲ್ ಕೇಸ್

Leave a Reply

Your email address will not be published.