ಶಾಲೆಗಳಿಗೆ ಜಲದಿಗ್ಬಂಧನ, ಊರುಗಳಿಗೆ ರಸ್ತೆ ಕಟ್, ಶಿವಮೊಗ್ಗದಲ್ಲಿ ಮಳೆ ಅನಾಹುತ

Rainfall

 

 

ಸುದ್ದಿ ಕಣಜ.ಕಾಂ | DISTRICT | RAIN DAMAGE
ಶಿವಮೊಗ್ಗ: ಧಾರಾಕಾರ ಮಳೆಗೆ ಜಿಲ್ಲಾದ್ಯಂತ ಭಾರಿ ಅನಾಹುತಗಳಾಗಿದ್ದು, ಕೆಲವೆಡೆ ಕೆರೆ ಏರಿಗಳು ಕುಸಿದರೆ, ಮನೆಗಳು ನೆಲಸಮಗೊಂಡಿವೆ. ಜನಜೀವನ ತತ್ತರಿಸಿದೆ.
ಸೊರಬ ತಾಲೂಕಿನ ಉರಗನಹಳ್ಳಿ-ದೇವತಿಕೊಪ್ಪ ದೊಡ್ಡಕೆರೆಯ ಏರಿಯು ಕುಸಿದಿದೆ. ಈ ಕೆರೆಯು ಸುಮಾರು 103.33 ಎಕರೆ ವಿಸ್ತೀರ್ಣ ಹೊಂದಿದ್ದು, ರಸ್ತೆಯು ಬಿರುಕು ಬಿಟ್ಟಿದೆ. ಜನರು ಆತಂಕದಲ್ಲಿದ್ದಾರೆ.
ತೋಟಕ್ಕೆ ನೀರು ನುಗ್ಗುವ ಆತಂಕ
ಏರಿಯ ಸಮೀಪವೇ 50 ಹೆಚ್ಚು ಎಕರೆಯಷ್ಟು ತೋಟವಿದೆ. ಒಂದುವೇಳೆ, ಕೆರೆಏರಿಯು ಒಡೆದರೆ ತೋಟಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಪ್ರಸ್ತುತ ಕೆರೆ ಏರಿಯು ನಾಲ್ಕೈದು ಅಡಿಯಷ್ಟು ಕುಸಿದಿದ್ದು, ದ್ವಿಚಕ್ರ ವಾಹನಗಳನ್ನು ಚಲಿಸಲು ಅವಕಾಶ ನೀಡಲಾಗಿದೆ.

READ | ರಾಗಿಗುಡ್ಡದಲ್ಲಿ ಗೋಡೆ ಕುಸಿದು ತಾಯಿ, ಮಗಳಿಗೆ ಗಾಯ, ಅವಶೇಷ ಅಡಿ ಸಿಲುಕಿದವರು ಸೇಫ್ 

ಮೈತಳ್ಳಿ-ಹುಂಚ ಬಳಿ ಧರೆ ಕುಸಿತ
ಹೊಸನಗರ ತಾಲೂಕಿನ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಂತೂರು ಗ್ರಾಮದಲ್ಲಿ ಮೈತಳ್ಳಿ-ಹುಂಚಾ ಸಂಪರ್ಕಕ್ಕೆ ಇರುವ ರಸ್ತೆಯ ಪಕ್ಕದಲ್ಲಿಯೇ ಧರೆ ಕುಸಿದಿದ್ದು, ಜನ ಸಂಚರಿಸಲು ಭಯ ಪಡುತ್ತಿದ್ದಾರೆ.
ಇದರೊಂದಿಗೆ, ಕೆಂಚನಾಲದ ಮಾರಿಕಾಂಬ ದೇವತೆಯ ತವರು ದೇವಸ್ಥಾನ ಮಳೆಯಿಂದ ಕುಸಿದಿದೆ. ಕಲ್ಲೂರಿನಲ್ಲಿ ಶೈಲಮ್ಮನವರಿಗೆ ಸಂಬಂಧಿಸಿದ ಗುಡಿಸಲು ಕುಸಿದಿದೆ. ಹೀಗೆ ತಾಲೂಕಿನಾದ್ಯಂತ ವಿವಿಧೆಡೆ ರಸ್ತೆಗಳು ಕುಸಿದಿವೆ.
ಧರೆಯತ್ತ ಬಾಗಿದ ವಿದ್ಯುತ್ ಕಂಬ
ಸಾಗರ ತಾಲೂಕಿನ ಆನಂದಪುರ ಸಮೀಪ ಬಿರುಸಾದ ಗಾಳಿಯಿಂದಾಗಿ ರೆಂಬೆಯೊಂದು ವಿದ್ಯುತ್ ಕಂಬದ ಮೇಲೆ ಬಿದ್ದಿದ್ದು, ಕಂಬ ಬಾಗಿದೆ. ಒಟ್ಟು 8 ವಿದ್ಯುತ್ ಕಂಬಗಳು ಧರೆಗುರುಳಿವೆ. ಐದು ಕಂಬ ತುಂಡಾಗಿವೆ ಎಂದು ಮಾಹಿತಿ ಲಭ್ಯವಾಗಿದೆ.
ಭದ್ರಾವತಿಯಲ್ಲಿ ನಿರಾಶ್ರಿತರಿಗೆ ಕಾಳಜಿ ಕೇಂದ್ರ
ಭದ್ರಾ ನದಿಯು ಸೃಷ್ಟಿಸಿರುವ ನೆರೆಯಿಂದಾಗಿ ನಿರಾಶ್ರಿತರಿಗೆ ಒಕ್ಕಲಿಗರ ಭವದನಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಪ್ರಸ್ತುತ ಕವಲಗುಂದಿ ವ್ಯಾಪ್ತಿಯ ನಿವಾಸಿಗಳಿಗೆ ಆಶ್ರಯ ನೀಡಲಾಗಿದೆ.
ಜಾನುವಾರು ಬಲಿ
ಸೊರಬ ತಾಲೂಕಿನಲ್ಲಿ ವಿದ್ಯುತ್ ಅವಘಡದಲ್ಲಿ ಮೂರು ಜಾನುವಾರುಗಳು ಮೃತಪಟ್ಟಿವೆ. ಕಾಸ್ವಾಡಿಕೊಪ್ಪ ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ಕೃಷ್ಣಪ್ಪ ಎಂಬುವವರಿಗೆ ಸೇರಿದ ಮೂರು ಎಮ್ಮೆಗಳು, ಚಿಟ್ಟೂರು ಗ್ರಾಮದಲ್ಲಿ ಮಾಲತೇಶ್ ಅವರಿಗೆ ಸೇರಿದ ಎರಡು ಹಸುಗಳು ವಿದ್ಯುತ್ ತಗುಲಿ ಮೃತಪಟ್ಟಿವೆ.
ಮಳೆಯ ಹೊಡೆತಕ್ಕೆ ಶಾಲೆಯೇ ಶಿಫ್ಟ್
ತ್ಯಾಗರ್ತಿಯಲ್ಲಿ ಮಳೆಯಿಂದಾಗಿ ಲಾವಿಗ್ಗೆರೆ ಗ್ರಾಮದಲ್ಲಿ ಕೆರೆಗಳು ತುಂಬಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಜಲದಿಗ್ಬಂಧನಕ್ಕೆ ಒಳಗಾಗಿದ್ದ ಶಾಲೆಯನ್ನು ನಿರ್ಮಾಣ ಹಂತದಲ್ಲಿರುವ ಶಾಲೆಗೆ ತಾತ್ಕಾಲಿಕವಾಗಿ ಶಿಫ್ಟ್ ಮಾಡಲಾಗಿದೆ.

https://suddikanaja.com/2022/07/16/incessant-rains-have-caused-loss-of-public-property-worth-crores-of-rupees-in-shimoga/

Leave a Reply

Your email address will not be published. Required fields are marked *

error: Content is protected !!