ಸುದ್ದಿ ಕಣಜ.ಕಾಂ | DISTRICT | EDUCATION CORNER
ಶಿವಮೊಗ್ಗ: ರಾಜ್ಯದಾದ್ಯಂತ ಸ್ನಾತಕ ಪದವಿ ಕೋರ್ಸ್ ಗಳು ಹಿಂದಿನಂತೆ ಈಗಲೂ ಕೂಡ ಮೂರು ವರ್ಷಗಳ ಅವಧಿಯಾದಾಗಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗಬಾರದಾಗಿ ಕುವೆಂಪು ವಿವಿ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ತವೇಶಾತಿ ಅವಧಿಯಲ್ಲಿ ವಿಸ್ತರಣೆ
ರಾಷ್ಟ್ರೀಯ ಶಿಕ್ಷಣ ನೀತಿ (national education policy-NEP) ಜಾರಿಗೊಂಡ ಬಳಿಕ ಬಿ.ಎ, ಬಿ.ಕಾಂ, ಬಿಎಸ್ಸಿ ಮತ್ತಿತರ ಸ್ನಾತಕ ಪದವಿ ಕೋರ್ಸ್ ಗಳ ಅವಧಿ ನಾಲ್ಕು ವರ್ಷಗಳಿಗೆ ಹೆಚ್ಚಳವಾಗಿದೆ ಎಂದು ಕೆಲವು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡಿದೆ. ಆದರೆ, ಇದು ತಪ್ಪು ತಿಳಿವಳಿಕೆಯಾಗಿದ್ದು, ಸ್ನಾತಕ ಪದವಿಗಳ ಅವಧಿ ಹಿಂದಿನಂತೆ ಈಗಲೂ ಕೂಡ ಮೂರು ವರ್ಷಗಳ ಅವಧಿಯಾಗಿರುತ್ತದೆ. ಪ್ರವೇಶಾತಿಯನ್ನು ದಂಡ ಶುಲ್ಕದೊಂದಿಗೆ ಆಗಸ್ಟ್ 20ರ ವರೆಗೆ ವಿಸ್ತರಿಸಲಾಗಿದ್ದು, ಯಾವುದೇ ಗೊಂದಲಕ್ಕೆ ಒಳಗಾಗದೆ ಪ್ರವೇಶ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಹಾಯಕ್ಕಾಗಿ ಹೆಲ್ಪ್ ಡೆಸ್ಕ್
ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಶಿವಮೊಗ್ಗ, ಚಿಕ್ಕಮಗಳೂರಿನ ಕಾಲೇಜುಗಳ ಪ್ರಾಂಶುಪಾಲರು ಈ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಹೆಲ್ಪ್ ಡೆಸ್ಕ್ ಗಳನ್ನು ಪ್ರಾರಂಭಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ನಿರಾತಂಕವಾಗಿ ಪ್ರವೇಶ ಪಡೆದುಕೊಳ್ಳಬಹುದು. ಯಾವುದೇ ಗೊಂದಲವಿದ್ದಲ್ಲಿ ಹೆಲ್ಪ್ ಡೆಸ್ಕ್ ಬಳಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
READ | ಶಿವಮೊಗ್ಗ ಜಿಲ್ಲೆಗೆ 1.09 ಲಕ್ಷ ಧ್ವಜಗಳ ಸಿದ್ಧ, ಯಾವ ತಾಲೂಕಿಗೆ ಎಷ್ಟು ಪೂರೈಕೆ, ಏನೇನು ಸಿದ್ಧತೆ ಮಾಡಲಾಗಿದೆ?
ಎನ್ಇಪಿಯಲ್ಲಿ ಹೊಸತೇನಿದೆ?
- ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪಿಯುಸಿ ನಂತರ ಸ್ನಾತಕ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಅನಿವಾರ್ಯ ಕಾರಣಗಳಿಂದ ಮೊದಲ ವರ್ಷದ ಬಳಿಕ ಕಾಲೇಜು ತೊರೆದರೆ ಅಂತಹ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ನೀಡಲಾಗುವುದು.
- ಇನ್ನು ಎರಡು ವರ್ಷ ಪೂರೈಸಿ ಶಿಕ್ಷಣ ಮೊಟಕುಗೊಳಿಸಿದರೆ, ಯುಜಿ ಡಿಪ್ಲೊಮಾ ಸರ್ಟಿಫಿಕೇಟ್ ನೀಡಲಾಗುವುದು.
- ಮೂರನೆಯ ವರ್ಷ ಪೂರೈಸುವ ವಿದ್ಯಾರ್ಥಿಗಳು ಹಿಂದಿನಂತೆಯೇ ಪದವಿ ಪ್ರಮಾಣ ಪತ್ರ ಸ್ವೀಕರಿಸಲಿದ್ದಾರೆ.
- ನಾಲ್ಕನೇ ವರ್ಷ ಹಾನರ್ಸ್ ಕೋರ್ಸ್ ಆಗಿದ್ದು, ಇದು ಕಡ್ಡಾಯವಾಗಿ ಇರುವುದಿಲ್ಲ. ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿರುತ್ತದೆ.
- ನಾಲ್ಕು ವರ್ಷ ಪೂರೈಸಿ ಹಾನರ್ಸ್ ಪದವಿ ಪಡೆಯುವ ವಿದ್ಯಾರ್ಥಿಗಳು ಒಂದು ವರ್ಷದ ಸ್ನಾತಕೋತ್ತರ ಪದವಿ ಕೋರ್ಸ್ ಗೆ ಪ್ರವೇಶ ಪಡೆದುಕೊಳ್ಳಬಹುದು ಅಥವಾ ನೇರವಾಗಿ ಪಿಎಚ್ ಡಿಗೆ ಅರ್ಜಿ ಸಲ್ಲಿಸಬಹುದು.
- ಮೂರು ವರ್ಷಗಳ ಪದವಿ ಪಡೆಯುವ ವಿದ್ಯಾರ್ಥಿಗಳು ಹಿಂದಿನಂತೆಯೇ ಎರಡು ವರ್ಷಗಳ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬಹುದು ಅಥವಾ ಪದವಿ ಆಧಾರಿತ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು.
- ಪ್ರಥಮ, ದ್ವಿತೀಯ ವರ್ಷ ಪೂರೈಸಿ ಕಾಲೇಜು ಬಿಟ್ಟ ವಿದ್ಯಾರ್ಥಿಗಳು ಮುಂದೆ ತಮ್ಮ ಅನುಕೂಲದ ಅವಧಿಯಲ್ಲಿ ಯಾವುದಾದರೂ ಕಾಲೆಜಿನಲ್ಲಿ ಮತ್ತೆ ಪ್ರವೇಶ ಪಡೆದು ಪದವಿ ಪೂರೈಸಲು ಅವಕಾಶವಿರುತ್ತದೆ
Kuvempu University ಪಿಜಿ ಪ್ರವೇಶ, ಎಲ್ಲೆಲ್ಲಿ ನಡೀತಿದೆ ಕೌನ್ಸೆಲಿಂಗ್