| HIGHLIGHTS |
- ಸರ್ಕಾರಿ ವೆಬ್’ಸೈಟ್’ಗಳಲ್ಲಿ ಮುಖಪುಟದಲ್ಲಷ್ಟೇ ಕನ್ನಡ, ಮಾಹಿತಿಯೆಲ್ಲ ಇಂಗ್ಲಿಷ್’ನಲ್ಲಿವೆ: ನಾಗಭರಣ ಸಿಡಿಮಿಡಿ
- ಬಹುತೇಕ ಇಲಾಖೆಗಳು ಕನ್ನಡದಲ್ಲಿಯೇ ಸೇವೆಯನ್ನು ಒದಗಿಸುತ್ತಿದ್ದರೂ, ಸಂಪೂರ್ಣ ಅನುಷ್ಠಾನ ಇನ್ನೂ ಆಗುತ್ತಿಲ್ಲ
- ಶಿಕ್ಷಕರ ಕೊರತೆಯಿಂದ ಮುಚ್ಚಲಾಗಿರುವ ಸರ್ಕಾರಿ ಶಾಲೆಗಳ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಗಳ ವಿವರಗಳನ್ನು ಒದಗಿಸಬೇಕು
ಸುದ್ದಿ ಕಣಜ.ಕಾಂ | KARNATAKA | 07 SEP 2022
ಶಿವಮೊಗ್ಗ: ಸರ್ಕಾರಿ ಇಲಾಖೆಗಳ ಎಲ್ಲ ವೆಬ್ಸೈಟ್ ಮತ್ತು ತಂತ್ರಾಂಶಗಳಲ್ಲಿ ಕನ್ನಡ ಭಾಷೆಗೆ ಕಡ್ಡಾಯವಾಗಿ ಪ್ರಥಮ ಆದ್ಯತೆಯನ್ನು ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ(Kannada Development Authority)ದ ಅಧ್ಯಕ್ಷ ಟಿ.ಎಸ್.ನಾಗಾಭರಣ (Talakadu Srinivasaiah Nagabharana) ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಕೆಲವು ಇಲಾಖೆಗಳ ವೆಬ್ಸೈಟ್(website)ನಲ್ಲಿ ಮುಖಪುಟದಲ್ಲಿ ಕನ್ನಡ ಭಾಷೆ ಬಳಕೆ ಇದ್ದರೂ, ಮಾಹಿತಿಗಳು ಇಂಗ್ಲಿಷ್ ಭಾಷೆ(english language) ಯಲ್ಲಿವೆ. ವೆಬ್ಸೈಟ್ಗಳಲ್ಲಿ ಪ್ರತಿ ಮಾಹಿತಿ ಕೂಡ ಕನ್ನಡದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಇದೇ ರೀತಿ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವ ತಂತ್ರಾಂಶಗಳಲ್ಲಿ ಸಹ ಕಡ್ಡಾಯವಾಗಿ ಕನ್ನಡವನ್ನು ಅಳವಡಿಸಬೇಕು. ಜನಸಾಮಾನ್ಯರಿಗೆ ನೇರವಾಗಿ ಸೇವೆಯನ್ನು ಒದಗಿಸುವ ಇಲಾಖೆಗಳಲ್ಲಿ ಕನ್ನಡದ ಅನುಷ್ಠಾನ ಕಡ್ಡಾಯವಾಗಿ ಶೇ.100ರಷ್ಟು ಜಾರಿಯಾಗಬೇಕು ಎಂದು ಹೇಳಿದರು.
ಮರಣೋತ್ತರ ವರದಿ, ಟೆಂಡರ್ ಸೇರಿ ಹಲವನ್ನು ಕನ್ನಡದಲ್ಲೇ ನೀಡಿ
ಬಹುತೇಕ ಇಲಾಖೆಗಳು ಕನ್ನಡದಲ್ಲಿಯೇ ಸೇವೆಯನ್ನು ಒದಗಿಸುತ್ತಿದ್ದರೂ, ಸಂಪೂರ್ಣ ಅನುಷ್ಠಾನ ಇನ್ನೂ ಆಗುತ್ತಿಲ್ಲ. ವೈದ್ಯರು ನೀಡುವ ಪೋಸ್ಟ್ ಮಾರ್ಟಮ್ ರಿಪೋರ್ಟ್ (ಮರಣೋತ್ತರ ವರದಿ), ಬ್ಯಾಂಕ್’ಗಳ ಪತ್ರ ವ್ಯವಹಾರ, ಸಾರ್ವಜನಿಕ ಸೇವೆಗಳು, ಔಷಧಿಗಳ ಹೆಸರು ಇತ್ಯಾದಿಗಳು ಕನ್ನಡದಲ್ಲಿ ಸಹ ಇರುವಂತೆ ನೋಡಿಕೊಳ್ಳಬೇಕು. ವಿವಿಧ ಇಲಾಖೆಗಳು ಪ್ರಕಟಿಸುವ ಟೆಂಡರ್ ಅಧಿಸೂಚನೆಗಳು ಇನ್ನೂ ಇಂಗ್ಲಿಷ್ನಲ್ಲಿರುವುದನ್ನು ಗಮನಿಸಲಾಗಿದೆ. ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಟೆಂಡರ್ ಅಧಿಸೂಚನೆ ಪ್ರಕಟಿಸಬೇಕು ಎಂದು ಹೇಳಿದರು.
READ | ನೈಋತ್ಯ ರೈಲ್ವೆ ಪ್ರಯಾಣಿಕರ ಸಂಚಾರದಲ್ಲಿ ದಾಖಲೆಯ ಸಾಧನೆ, ಆದಾಯ ಕೇಳಿದರೆ ಶಾಕ್ ಆಗ್ತೀರಾ!
ನವೆಂಬರ್ 1ರಿಂದ ಕನ್ನಡ ಅಂಕಿ ಅಭಿಯಾನ
ಕನ್ನಡ ಅನುಷ್ಠಾನದಲ್ಲಿನ ಲೋಪಗಳ ಕುರಿತು ಪ್ರಾಧಿಕಾರಕ್ಕೆ ಬಂದಿರುವ ದೂರುಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಗೋಪಾಲಗೌಡ ಬಡಾವಣೆಯಲ್ಲಿರುವ ರಾಷ್ಟ್ರೀಯ ಬ್ಯಾಂಕ್ನಲ್ಲಿ ಅರ್ಜಿ ನಮೂನೆಗಳು ಕನ್ನಡದಲ್ಲಿ ಇಲ್ಲದ ಬಗ್ಗೆ ದೂರುಗಳು ಬಂದಿದ್ದು, ಇದನ್ನು ತಕ್ಷಣ ಸರಿಪಡಿಸಬೇಕು. ಶಿಕ್ಷಕರ ಕೊರತೆಯಿಂದ ಮುಚ್ಚಲಾಗಿರುವ ಸರ್ಕಾರಿ ಶಾಲೆಗಳ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಗಳ ವಿವರಗಳನ್ನು ಒದಗಿಸಬೇಕು. ಕನ್ನಡ ಕಲಿಕಾ ಅಧಿನಿಯಮ 2017 ಅನ್ವಯ ಪ್ರತಿ ಶಾಲೆಗಳಲ್ಲಿ ಒಂದರಿಂದ 5ನೇ ತರಗತಿವರೆಗೆ ಕಡ್ಡಾಯವಾಗಿ ಕನ್ನಡವನ್ನು ಕಲಿಸಬೇಕಾಗಿದ್ದು, ಅದರ ಅನುಷ್ಠಾನ ಪರಿಶೀಲಿಸಬೇಕು. ಕನ್ನಡ ಅಂಕಿಗಳ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನವೆಂಬರ್ 1ರಿಂದ ಕನ್ನಡ ಅಂಕಿ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಉಪಸ್ಥಿತರಿದ್ದರು.
https://suddikanaja.com/2021/02/01/bhadravathi-raf-central-clarification/