
HIGHLIGHTS
- ಶಿರಾಳಕೊಪ್ಪ ಪಟ್ಟಣ ಮತ್ತು ಸುತ್ತಮುತ್ತ 1 ಕಿಮೀವರೆಗೆ ಭೂಮಿ ಕಂಪಿಸಿದ ಅನುಭವ
- ಸೋಶಿಯಲ್ ಮೀಡಿಯಾದಲ್ಲಿ ಭೂಕಂಪನದ ಸಂದೇಶ ವೈರಲ್ ಬೆನ್ನಲ್ಲೇ ಜನರಲ್ಲಿ ಗಾಬರಿ
- ತಹಸೀಲ್ದಾರ್ ನೇತೃತ್ವದಲ್ಲಿ ಪರಿಶೀಲನೆ, ಡಿಸಿಗೆ ಮಾಹಿತಿ ರವಾನೆ, ರಿಕ್ಟರ್ ನಲ್ಲಿ ದಾಖಲಾಗಿಲ್ಲ ಭೂಕಂಪನ
ಸುದ್ದಿ ಕಣಜ.ಕಾಂ | DISTRICT | 06 OCT 2022
ಶಿಕಾರಿಪುರ(shikaripura): ತಾಲೂಕಿನ ಶಿರಾಳಕೊಪ್ಪ(shiralakoppa)ದಲ್ಲಿ ಗುರುವಾರ ಬೆಳಗಿನ ಜಾವ ಭೂ ಕಂಪಿಸಿದ ಅನುಭವವಾಗಿದ್ದು, ಪಟ್ಟಣದ ಕುಂಬಾರಕೇರಿಯಲ್ಲಿ ಮಾತ್ರ ಒಂದೆರಡು ಮನೆಯವರು ಹೊರಗಡೆ ಬಂದಿದ್ದಾರೆಯೇ ವಿನಹ ಪಟ್ಟಣದ ತುಂಬೆಲ್ಲ ಜನ ಮನೆಯಿಂದ ಹೊರಗೆ ಬಂದಿಲ್ಲ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ 3.55ರ ಹೊತ್ತಿಗೆ ಭೂಮಿ ಕಂಪಿಸಿದೆ. ಶಿರಾಳಕೊಪ್ಪ ಮಾತ್ರವಲ್ಲದೇ ಸುತ್ತಮುತ್ತ 1 ಕಿಮೀವರೆಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ತಹಸೀಲ್ದಾರ್ ಕವಿರಾಜ್ ಹೇಳಿದ್ದೇನು?
ತಹಸೀಲ್ದಾರ್ ಕವಿರಾಜ್ (Kaviraj) ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ‘ ಯಾರೂ ಗಾಬರಿಯಾಗಬೇಕಾದ ಅಗತ್ಯವಿಲ್ಲ. ಭೂಮಿ ಕಂಪಿಸಿದ ಅನುಭವವಾಗಿದ್ದು, ಇದು ಭೂ ಕಂಪನವೋ ಅಥವಾ ಮತ್ತೇನಾದರೂ ಕಾರಣ ಇದೆಯೇ ಎಂಬುವುದು ತಿಳಿದುಬರಬೇಕಿದೆ. ಈ ಬಗ್ಗೆ ಡಿಸಿ ಅವರಿಗೂ ಮಾಹಿತಿ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಜನರಲ್ಲಿ ಗಾಬರಿ
ಬೆಳಗಿನ ಜಾವ ಭೂಮಿ ಕಂಪಿಸಿದ ಅನುಭವ ಹಲವರಿಗೆ ಆಗಿಯೇ ಇಲ್ಲ. ಎಚ್ಚರವಿದ್ದವರಿಗೆ ಗೊತ್ತಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಘಟನೆಯ ಬೆನ್ನಲ್ಲೇ ಮೊಬೈಲ್ ಸ್ಕ್ರೀನ್ ಶಾಟ್’ವೊಂದು ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್(viral) ಆಗಿದೆ. ಅದರಲ್ಲಿ 4.1 ರಿಕ್ಟರ್’ನಷ್ಟು ಭೂಕಂಪನ(Earthquake)ವಾಗಿದೆ ಎಂದು ಹೇಳಲಾಗಿದೆ. ಶಿರಾಳಕೊಪ್ಪ ಸುತ್ತ ರೆಡ್ ಅಲರ್ಟ್ ಎನ್ನುವ ರೀತಿಯಲ್ಲಿ ಮಾರ್ಕ್ ಮಾಡಲಾಗಿದೆ. ಈ ಸಂದೇಶ ಬೆಳಗ್ಗೆಯೊಂದಲೇ ಭಾರೀ ವೈರಲ್ ಆಗಿದ್ದು ಜನರು ಗಾಬರಿಯಾಗಿದ್ದಾರೆ. ಇದು ಸಾಲದೆಂಬಂತೆ ಮನೆಗಳು ಬಿದ್ದಿವೆ ಎಂಬೆಲ್ಲ ಸುಳ್ಳು ಸುದ್ದಿಗಳು ಹರಡಲಾಗಿದೆ. ವಾಸ್ತವದಲ್ಲಿ ಅಹಿತಕರ ಘಟನೆ, ಪ್ರಾಣ ಹಾನಿಗಳು ಸಂಭವಿಸಿಲ್ಲ ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.
ಮಲೆನಾಡಿನ ಭೂ ಕುಸಿತದ ಫೈನಲ್ ರಿಪೋರ್ಟ್ ಸಿಎಂಗೆ ಸಲ್ಲಿಕೆ, ಯಡಿಯೂರಪ್ಪ ಹೇಳಿದ್ದೇನು?