ಸುದ್ದಿ ಕಣಜ.ಕಾಂ | SHIVAMOGGA CITY
ಶಿವಮೊಗ್ಗ(Shivamogga): ನಗರ ವ್ಯಾಪ್ತಿಯ ಎಲ್ಲ ಆಟೋಗಳು ಕಡ್ಡಾಯವಾಗಿ ನವೆಂಬರ್ 14ರೊಳಗೆ ಮೀಟರ್ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಸೂಚನೆ ನೀಡಿದರು.
ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಆಟೋ ಚಾಲಕರು (auto driver) ಹಾಗೂ ಮಾಲೀಕರ ಸಮಸ್ಯೆ, ಅಹವಾಲು ಆಲಿಸಿದ ಮಾತನಾಡಿದ ಅವರು, ಕಡ್ಡಾಯವಾಗಿ ಮೀಟರ್ (meter) ಅಳವಡಿಸಿದ ಬಳಿಕವೇ ದರ ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದರು.
READ | ಶಿವಮೊಗ್ಗದಲ್ಲಿ ಆಟೋ ಚಾಲಕರು ಪ್ರಯಾಣಿಕರಿಗೆ ಹೆಚ್ಚು ಬಾಡಿಗೆ ವಿಧಿಸುವಂತಿಲ್ಲ, ಆರ್.ಟಿ.ಓ ರೂಲ್ಸ್ ಏನಿದೆ?
ನವೆಂಬರ್ 14ರಂದು ಮತ್ತೊಂದು ಸಭೆ ನಡೆಸಲಾಗುವುದು. ಆಗ ಮುಖ್ಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಪ್ರಿಪೇಯ್ಡ್ (prepaid) ಆಟೋ ನಿಲ್ದಾಣ ಆರಂಭದ ಬಗ್ಗೆ ತೀರ್ಮಾನಿಸಲಾಗುವುದು. ಈ ಗಡುವಿನೊಳಗೆ ಮೀಟರ್ ಅಳವಡಿಸಬೇಕು ಎಂದು ತಿಳಿಸಿದರು.
- ಕರ್ನಾಟಕದಲ್ಲಿ ಎಲ್ಲ ಆಟೋ ಚಾಲಕರಿಗೆ ಖಾಕಿಯೇ ಸಮವಸ್ತ್ರ, ಬ್ಯಾಟರಿ ಚಾಲಿತ ಆಟೋಗಳಿಗೆ ಬಿಳಿ ಸಮವಸ್ತ್ರ ಮಾಡಲಾಗದು
- ಆಟೋಗಳಿಗೆ ಮೀಟರ್ ಅಳವಡಿಕೆ ಸಂಬಂಧ ಅಗತ್ಯವಿದ್ದರೆ ವಿಶೇಷ ಮೇಳ ಆಯೋಜನೆ ಮಾಡಲಾಗುವುದು
- ನಗರ ವ್ಯಾಪ್ತಿಯ ಕೆಲವು ರಸ್ತೆಗಳಷ್ಟೇ ಸರಿಯಿಲ್ಲ. ಉಳಿದವು ಚೆನ್ನಾಗಿಯೇ ಇವೆ. ಹೀಗಾಗಿ, ಇಂತಹ ನೆಪಗಳನ್ನು ಹೇಳಿ ಮೀಟರ್’ನಿಂದ ತಪ್ಪಿಸಿಕೊಳ್ಳಲಾಗದು
ದರ ಪರಿಷ್ಕರಣೆಯ ಬೇಡಿಕೆ
ನಗರ ವ್ಯಾಪ್ತಿಯಲ್ಲಿ ಆಟೋ ಚಾಲಕರು ದರ ಪರಿಷ್ಕರಣೆಯ ಬಗ್ಗೆ ಬೇಡಿಕೆ ಸಲ್ಲಿಸಿದ್ದು, ಅದರ ಪ್ರಕಾರ ಕನಿಷ್ಠ ಪ್ರಯಾಣ ದರವನ್ನು ₹30 ಇದ್ದು, ಅದನ್ನು ₹40-50ಗೆ ಏರಿಕೆ ಮಾಡಬೇಕು. ಪ್ರತಿ ಕಿಲೋಮೀಟರ್ ಗೆ ₹20 ನಿಗದಿಪಡಿಸಬೇಕು ಎಂದು ಕೋರಲಾಗಿದೆ. ಆದರೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಾಗೂ ಆಟೋ ಚಾಲಕರಿಗೂ ನಷ್ಟ ಆಗದಂತೆ ತೀರ್ಮಾನಿಸಬೇಕಾಗುತ್ತದೆ ಎಂದು ಡಿಸಿ ತಿಳಿಸಿದರು.
ವ್ಯಾಪ್ತಿ ವಿಸ್ತರಣೆಗೆ ಮನವಿ
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಆಟೋಗಳು ಪ್ರಸ್ತುತ 10 ಕಿ.ಮೀ. ಮಾತ್ರ ಸಂಚರಿಸಲು ಅವಕಾಶವಿದೆ. ಅದನ್ನು 20 ಕಿ.ಮೀಗೆ ಹೆಚ್ಚಿಸಬೇಕು ಎಂದು ಆಟೋ ಚಾಲಕರು ಮನವಿ ಮಾಡಿದರು. ಇದನ್ನು ಪರಿಶೀಲಿಸಲಾಗುವುದು. ನೆರೆಯ ಜಿಲ್ಲೆಗಳಲ್ಲಿ ಯಾವ ರೀತಿಯ ವ್ಯವಸ್ಥೆ ಇದೆ ಎಂಬ ಬಗ್ಗೆ ಮಾಹಿತಿ ತರಿಸಿಕೊಳ್ಳಲಾಗುವುದು. ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್(GK Mithun Kumar), ಆರ್.ಟಿಓ ಜೆ.ಪಿ.ಗಂಗಾಧರ್(JP Gangadhar), ಸಂಚಾರ ಠಾಣೆ ಪಿಐ ಸಂತೋಷ್ ಕುಮಾರ್, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಜ್ಗರ್ ಬಾಷಾ ಉಪಸ್ಥಿತರಿದ್ದರು.
https://suddikanaja.com/2021/07/29/private-ticket-25-percent-hike-will-decide-soon-said-by-dc-shivakumar/