ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಅಡಿಕೆ ಎಲೆಚುಕ್ಕೆ ರೋಗ (Areca palm leaf spot disease) ಅಧ್ಯಯನಕ್ಕೆ ಕೇಂದ್ರ ಸರ್ಕಾರ ಸಮಿತಿಯನ್ನು ನಿಯೋಜನೆ ಮಾಡಿದ್ದು, ಕರ್ನಾಟಕಕ್ಕೆ ಭೇಟಿ ನೀಡಲಿದೆ ಎಂದು ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
READ | ಶಿವಮೊಗ್ಗದ 6 ಪೊಲೀಸ್ ಠಾಣೆಗಳ 82 ರೌಡಿಗಳಿಗೆ ಎಸ್ಪಿ ಕ್ಲಾಸ್, ಖಡಕ್ ವಾರ್ನಿಂಗ್
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚೆಗಷ್ಟೇ, ರಾಜ್ಯ ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾದ ಎಲೆಚುಕ್ಕೆ ರೋಗಕ್ಕೆ ಪರಿಹಾರ ಬಯಸಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೇಂದ್ರ ಕೃಷಿ ಸಚಿವ ನರೆಂದ್ರ ಸಿಂಗ್ ಥೋಮರ್ ಅವರಿಗೆ ನವದೆಹಲಿಯಲ್ಲಿ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿತ್ತು. ಈ ಮೂಲಕ ಕೇಂದ್ರ ಸರಕಾರದ ಗಮನ ಸೆಳೆಯಲಾಗಿತ್ತು. ಅದಕ್ಕೀಗ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅಡಿಕೆ ತೋಟಗಳಲ್ಲಿ ಹಬ್ಬಿರುವ ಎಲೆಚುಕ್ಕೆ ರೋಗದ ಬಗ್ಗೆ ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಕೇಂದ್ರ ಸರಕಾರದ ಏಳು ಮಂದಿ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿದ್ದು, ಮುಂದಿನ ವಾರ ರಾಜ್ಯಕ್ಕೆ ಆಗಮಿಸಲಿದೆ ಎಂದು ತಿಳಿಸಿದರು.
ಮಲೆನಾಡು ಹಾಗೂ ಕರಾವಳಿ ಭಾಗದ ರೈತರು ಎದುರಿಸುತ್ತಿರುವ ಸಂಕಷ್ಟಕ್ಕೆ ಕೇಂದ್ರ ಸರಕಾರ ತಕ್ಷಣ ಸ್ಪಂದಿಸಿದ್ದು, ಅಡಿಕೆ ಬೆಳೆಗೆ ಎದುರಾಗಿರುವ ರೋಗ ನಿವಾರಣೆಗೆ, ಸಮಿತಿ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿ.
| ಆರಗ ಜ್ಞಾನೇಂದ್ರ, ಅಧ್ಯಕ್ಷ, ಅಡಿಕೆ ಟಾಸ್ಕ್ ಫೋರ್ಸ್
ನ.22ರಂದು ಚಿಕ್ಕಮಗಳೂರಿಗೆ ತಜ್ಞರ ತಂಡ
ರಾಜ್ಯದಲ್ಲಿ ಸುಮಾರು 20 ಸಾವಿರ ಹೆಕ್ಟೆರ್ ಪ್ರದೇಶದ ಅಡಿಕೆ ತೋಟಗಳು, ಎಲೆ ಚುಕ್ಕೆ ರೋಗಕ್ಕೆ ಬಲಿಯಾಗಿದ್ದು, ಕಾಳ್ಗಿಚ್ಚಿನಂತೆ ಇತರೆಡೆ ಹರಡುತ್ತಿದೆ. ಸಂಶೋಧಕರ ತಂಡವು ಇದೇ ತಿಂಗಳು 22ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿಗೆ ಆಗಮಿಸಲಿದೆ. ತಜ್ಞರನ್ನು ಭೇಟಿಯಾಗಿ ಪರಿಸ್ಥಿತಿಯ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು.
ಸುಮಾರು ಐವತ್ತು ಲಕ್ಷ ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಜೀವನೋಪಾಯ ಕಲ್ಪಿಸಿಕೊಟ್ಟಿರುವ ಅಡಿಕೆ ಬೆಳೆ, ನಮ್ಮ ಭಾಗದ ರೈತರ ಆರ್ಥಿಕ ಜೀವನಾಡಿಯಾಗಿದೆ ಎಂದು ಹೇಳಿದರು.
ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿ ಭಾಗದಲ್ಲಿ ರೈತ ಸಮುದಾಯದ ಜೀವನಾಡಿಯಾದ ಅಡಿಕೆ ಬೆಳೆ ಎಲೆಚುಕ್ಕೆ ರೋಗದಿಂದ ನಲುಗಿದೆ. ನಿಯಂತ್ರಣ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ನಿಯೋಗದಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಹರತಾಳು ಹಾಲಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಕೃಷ್ಣ ಭಟ್ ಇತರರಿದ್ದರು.