ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಓಟರ್ ಐಡಿ ವರ್ಗಾವಣೆ, ರದ್ದತಿ, ಹೊಸ ಹೆಸರು ಸೇರ್ಪಡೆ ಹೀಗೆ ಎಲ್ಲದ್ದಕ್ಕೂ ವಿವಿಧ ರೀತಿಯ ಅರ್ಜಿಗಳಿದ್ದು, ಅದರ ಪೂರ್ಣ ಮಾಹಿತಿ ಇಲ್ಲಿದೆ.
ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಅವರುಗಳು ಸ್ಥಳಾಂತರ ಹೊಂದಿದ್ದಲ್ಲಿ, ಮೃತ ಹೊಂದಿದ್ದಲ್ಲಿ, ಹೆಸರು ಪುನರಾವರ್ತನೆಯಾಗಿದ್ದಲ್ಲಿ ಅವರುಗಳ ಹೆಸರನ್ನು ತೆಗೆದು ಹಾಕಲು ನಮೂನೆ-7ರಲ್ಲಿ, ಹೆಸರು ಇತ್ಯಾದಿ ತಿದ್ದುಪಡಿ ಬಯಸಿದ್ದಲ್ಲಿ ನಮೂನೆ-8ರಲ್ಲಿ ಸೂಕ್ತ ದಾಖಲೆಯೊಂದಿಗೆ ಅರ್ಜಿಗಳನ್ನು ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ (ಬಿ.ಎಲ್.ಓ) ಅವರಿಗೆ ನಿಗದಿಪಡಿಸಿದ ಅವಧಿಯೊಳಗಾಗಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು.READ | ನಾಲ್ಕು ಕೇಸ್ ಬೇಧಿಸಲು ನೆರವಾದ ಆ ಒಂದು ಪ್ರಕರಣ, ಆರೋಪಿ ಬಳಿ ಸಿಕ್ತು ₹1.71 ಲಕ್ಷ ಮೌಲ್ಯದ ಸಾಮಗ್ರಿ!
ಯುವ ಮತದಾರರು ಹಾಗೂ ಹೊಸ ಸೇರ್ಪಡೆಗೆ, ಮತದಾರ ಮರಣ ಹೊಂದಿದ್ದಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲು ಹಾಗೂ ಹಾಲಿ ಇರುವ ಮತದಾರ ಸ್ಥಳಾಂತರಗೊಂಡಿದ್ದಲ್ಲಿ, ಹೆಸರು, ವಿಳಾಸ ತಿದ್ದುಪಡಿ ಮಾಡಬೇಕಾದಲ್ಲಿ ನವೆಂಬರ್ 9ರಿಂದ ಡಿಸೆಂಬರ್ 8ರ ವರೆಗೆ ಆಯಾ ಮತಗಟ್ಟೆ ಅಧಿಕಾರಿಗಳಿಗೆ ಅಥವಾ ಸಂಬಂಧಪಟ್ಟ ತಾಲೂಕು ಕಚೇರಿಗಳಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ. ಅಲ್ಲದೇ ಮತದಾರರು ತಾವೇ ಚುನಾವಣಾ ಶಾಖೆಯ ಜಾಲತಾಣ http://www.nvsp.in ಮತ್ತು http://voterportal.eci.gov.in ಹಾಗೂ ಸಹಾಯವಾಣಿ voter helpline App ಗಳಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಮತಗಟ್ಟೆಗಳಲ್ಲಿ ವಿಶೇಷ ನೋಂದಣಿ
ನವೆಂಬರ್ 20 (ಭಾನುವಾರ), 2022ರ ಡಿಸೆಂಬರ್ 3ರ (ಶನಿವಾರ), ಡಿಸೆಂಬರ್ 4ರ (ಭಾನುವಾರ) ಗಳಂದು ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ವಿಶೇಷ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಅರ್ಹ ನಾಗರಿಕರು ಹಾಗೂ 18 ರಿಂದ 19 ವಯೋಮಾನದ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ನಮೂನೆ-6 ರಲ್ಲಿ ಸಂಬಂಧಪಟ್ಟ ಬಿ.ಎಲ್.ಓ.ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಸದವಕಾಶವನ್ನು ಸದುಪಯೋಗಪಡೆದುಕೊಳ್ಳಿ
ಈ ಅವಧಿಯಲ್ಲಿ ಸ್ವೀಕರಿಸಿದ ಹಕ್ಕು ಮತ್ತು ಆಕ್ಷೇಪಣೆಯ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಡಿಸೆಂಬರ್ 26ರಂದು ಇತ್ಯರ್ಥಪಡಿಸಲಾಗುವುದು. ನಂತರ ಪೂರಕ ಪಟ್ಟಿಯನ್ನು ಜನವರಿ 2023ರ 3ರಂದು ತಯಾರಿಸಿ ಅಂತಿಮ ಮತದಾರರ ಪಟ್ಟಿಯನ್ನು 5ರಂದು ಪ್ರಕಟಿಸಲಾಗುವುದು.