
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜೀವನಪೂರ್ತಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಬಳಿಕ ಹೇಳಿಕೊಳ್ಳಬಹುದಾದ ನಿವೃತ್ತಿ ವೇತನ ಸಿಗುತ್ತಿಲ್ಲ. ಇದರಿಂದ ನೌಕರರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ, ಹಳೇ ನಿವೃತ್ತಿ ವೇತನವನ್ನೇ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್. ರಾಘವೇಂದ್ರ ಆಗ್ರಹಿಸಿದರು.
ಮಾಡು ಇಲ್ಲವೇ ಮಡಿ ಅನಿರ್ದಿಷ್ಟಾವಧಿ ಹೋರಾಟ
‘ಮಾಡು ಇಲ್ಲವೇ ಮಡಿ’ ಅನಿರ್ಧಿಷ್ಟಾವಧಿ ಹೋರಾಟವನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಡಿ.19ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ರಾಜಕಾರಣಿಗಳಿಗೆ ಮಾತ್ರ ಹಳೇ ನಿವೃತ್ತಿ ವೇತನವನ್ನು ಇಟ್ಟುಕೊಂಡು ನೌಕರರನ್ನು ನೂತನ ನಿವೃತ್ತಿ ವೇತನ ಯೋಜನೆಗೆ ಒಳಪಡಿಸಿ ಅನ್ಯಾಯ ಮಾಡಲಾಗಿದೆ. ಆರಂಭದಲ್ಲಿ ಎನ್.ಪಿ.ಎಸ್.ನಿಂದ ಭಾರಿ ಪ್ರಯೋಜನವಾಗಲಿದೆ ಎಂಬಂತೆ ಬಿಂಬಿಸಲಾಗಿತ್ತು. ಆದರೆ, ಇದರಿಂದ ನೌಕರರು ಇನ್ನಷ್ಟು ಸಂಕಷ್ಟದಲ್ಲಿ ಸಿಲುಕಿದ್ದಾರೆ.
| ಕೆ.ಎನ್. ರಾಘವೇಂದ್ರ, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘ
ಸರ್ಕಾರಿ ಕೆಲಸಕ್ಕೆ ಸೇರುವ ನೌಕರರಿಗೆ 2006 ರಿಂದ ನೂತನ ಪಿಂಚಣಿ ಯೋಜನೆ(ಎನ್ಪಿಎಸ್) ಜಾರಿಗೆ ತಂದಿದ್ದು, ಇದೊಂದು ಅವೈಜ್ಞಾನಿಕ ಯೋಜನೆಯಾಗಿದೆ. ನಿವೃತ್ತಿಯಾಗುವ ನೌಕರರಿಗೆ ಕನಿಷ್ಠ ವೇತನ ಸಿಕ್ಕುತ್ತಿಲ್ಲ. ಇದನ್ನು ಸರಿಪಡಿಸುವಂತೆ ಮೊದಲಿನಿಂದಲೂ ಆಗ್ರಹಿಸುತ್ತಿದ್ದರೂ ಸರ್ಕಾರ ಪರಿಗಣಿಸಿಲ್ಲ ಎಂದು ಆರೋಪಿಸಿದರು.
READ | ಸಂಜೆಯಿಂದ ಶಿವಮೊಗ್ಗ ಜಿಲ್ಲೆಯ ಈ ರಸ್ತೆಯಲ್ಲಿ ಸಂಚಾರ ಬಂದ್, ಪರ್ಯಾಯ ಮಾರ್ಗದ ವ್ಯವಸ್ಥೆ
ಪುಡಿಗಾಸಿನಷ್ಟು ನಿವೃತ್ತಿ ವೇತನ
ಎನ್.ಪಿ.ಎಸ್ ಅಡಿ ಕೆಲಸಕ್ಕೆ ಸೇರಿದ್ದ ಕೆಲವರು ನಿವೃತ್ತಿ ಹಂತದಲ್ಲಿದ್ದಾರೆ. ಅಂತಹವರಿಗೆ ಬರೀ 800 ರೂ. ಹಾಗೂ ಸಾವಿರದ ಒಳಗೆ ನಿವೃತ್ತಿ ವೇತನ ಸಿಕ್ಕುತ್ತಿದೆ. ಇನ್ನು ಕೆಲವರಿಗೆ ಅದೂ ಸಿಕ್ಕುತ್ತಿಲ್ಲ. ಜೀವನ ಪೂರ್ತಿ ದುಡಿದ ನೌಕರರಿಗೆ ನಿವೃತ್ತಿ ಅವಧಿಯಲ್ಲಿ ಯಾವುದೇ ವೇತನವೂ ಇಲ್ಲದೆ ಪರಿತಪಿಸುವಂತಾಗಿದೆ ಎಂದು ಹೇಳಿದರು.
ಡಿ.13ರಂದು ಪೂರ್ವಭಾವಿ ಸಭೆ
ಪೂರ್ವಭಾವಿಯಾಗಿ ಡಿ.13ರಂದು ಸಂಜೆ 4.30ಕ್ಕೆ ಮಹಾನಗರ ಪಾಲಿಕೆ ಆವರಣದಲ್ಲಿ ಎಲ್ಲ ನೌಕರರು ಸಮಾವೇಶಗೊಂಡು ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ನವೀನ್ ಕುಮಾರ್ ಎಂಬ ಒಬ್ಬ ನೌಕರ ಡಿ.17ರಂದು ಸೈಕಲ್ ಜಾಥಾ ಮೂಲಕ ಬೆಂಗಳೂರಿನ ಫ್ರೀಡಂ ಪಾರ್ಕ್’ಗೆ ತೆರಳಲಿದ್ದು, ಎಲ್ಲ ನೌಕರರು ಅವರಿಗೆ ಬೀಳ್ಕೊಡಲಿದ್ದಾರೆ ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ತಾಲೂಕು ಸಂಘಗಳ ಅಧ್ಯಕ್ಷ ಎಸ್.ಪ್ರಭಾಕರ್, ರಂಗನಾಥ್, ಶರತ್ ಕುಮಾರ್, ಜಮಾಲುದ್ದೀನ್ ಬಳಿಗಾರ್, ರಾಜಪ್ಪ ಮಠದ್, ಪ್ರಮುಖರಾದ ಡಾ. ಪರಿಸರ ನಾಗರಾಜ್, ಡಾ. ಹಾಲಮ್ಮ, ಡಾ, ಶುಭಾ ಮರವಂತೆ, ಮಂಜಾನಾಯ್ಕ, ಮೆಹಬೂಬ್ ಪಾಶ ಉಪಸ್ಥಿತರಿದ್ದರು.
Cabinet meeting | ತೀರ್ಥಹಳ್ಳಿಯಲ್ಲಿ ₹75 ಕೋಟಿಯ 2 ಯೋಜನೆಗಳಿಗೆ ಸಂಪುಟದಲ್ಲಿ ಗ್ರೀನ್ ಸಿಗ್ನಲ್, ಯಾವ್ಯಾವ ಕಾಮಗಾರಿ?