ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (shimoga davanagere chitradurga milk producers societies union limited- ಶಿಮುಲ್)ವು ರೈತರಿಗೆ ಶುಭ ಸುದ್ದಿ ನೀಡಿದೆ. ಜನವರಿ 21ರಿಂದ ಅನ್ವಯವಾಗುವಂತೆ ಉತ್ಪಾದಕರಿಂದ ಖರೀದಿಸುವ ಪ್ರತಿ ಕೆಜಿ ಹಾಲಿಗೆ ₹1.59 ಹೆಚ್ಚಿಸಲಾಗಿದೆ.
ಈ ಕುರಿತು ಶುಕ್ರವಾರ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಶಿಮುಲ್ ವ್ಯವಸ್ಥಾಪಕ ನಿರ್ದೇಶಕರು, ಒಕ್ಕೂಟದ ಆರ್ಥಿಕ ಪರಿಸ್ಥಿತಿ ಅವಲೋಕಿಸಿ ಹಾಲು ಖರೀದಿ ದರವನ್ನು ಕಾಲ ಕಾಲಕ್ಕೆ ಪರಿಷ್ಕರಿಸುತ್ತಾ ಬರಲಾಗುತ್ತಿದೆ. ಬೆಲೆ ಹೆಚ್ಚಿಸಿರುವುದರಿಂದ ಒಕ್ಕೂಟದಿಂದ ಸಂಘಗಳಿಗೆ ಪ್ರತಿ ಕೆಜಿ ಹಾಲಿಗೆ ₹33.71 ಹಾಗೂ ಸಂಘಗಳಿಂದ ಉತ್ಪಾದಕರಿಗೆ ಪ್ರತಿ ಕೆಜಿಗೆ ₹31.85 ಬೆಲೆ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
READ | ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ದಿನಾಂಕ ನಿಗದಿ ಬೆನ್ನಲ್ಲೇ ಉಗ್ರ ಸ್ವರೂಪದ ಹೋರಾಟದ ಎಚ್ಚರಿಕೆ, ಕಾರಣವೇನು?
ಸಭೆಯಲ್ಲಿ ಖರೀದಿ ದರದಲ್ಲಿ ಏರಿಕೆ
ಜನವರಿ 16ರಂದು ಶಿಮುಲ್ ಅಧ್ಯಕ್ಷ ಶ್ರೀಪಾದ್ ರಾವ್ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ದರ ಏರಿಕೆಯ ಬಗ್ಗೆ ನಿರ್ಧರಿಸಲಾಗಿದೆ.
ಸಭೆಯಲ್ಲಿ ಉಪಾಧ್ಯಕ್ಷ ಎಚ್.ಕೆ.ಬಸಪ್ಪ, ನಿರ್ದೇಶಕರಾದ ಸಿ.ವೀರಭದ್ರ ಬಾಬು, ಡಿ.ಆನಂದ್, ವಿದ್ಯಾಧರ, ಜಗದೀಶಪ್ಪ ಬಣಕಾರ್, ಟಿ.ಶಿವಶಂಕರಪ್ಪ, ಪಿ.ತಿಪ್ಪೇಸ್ವಾಮಿ, ಎಚ್.ಬಿ.ದಿನೇಶ್, ಬಿ.ಜಿ.ಬಸವರಾಜಪ್ಪ, ಕೆ.ಎ.ತಾರಾನಾಥ, ಕೆ.ಎನ್.ಸೋಮಶೇಖರಪ್ಪ, ಜಿ.ಪಿ.ಯಶವಂತರಾಜು, ಎನ್.ಎಚ್.ಭಾಗ್ಯ, ಎಂ.ಸಿದ್ದಲಿಂಗಪ್ಪ, ಎನ್.ಡಿ.ಹರೀಶ್, ವ್ಯವಸ್ಥಾಪಕ ನಿರ್ದೇಶಕ ಡಾ. ಕೆ.ಎಸ್.ಬಸವರಾಜ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಎಸ್.ಬಿ. ಯಲಿ, ಉಪ ನಿಬಂಧಕ ವಾಸುದೇವ್, ಕರ್ನಾಟಕ ಹಾಲು ಮಹಾಮಂಡಳದ ಪ್ರತಿನಿಧಿ ಬಿ.ಟಿ.ಕಿಶೋರ್, ಒಕ್ಕೂಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
READ | ಶಿಮುಲ್ಗೆ ಎಫ್ಎಸ್ಎಸ್ಇ ದೃಢೀಕರಣ ಪತ್ರ, ಹೇಗೆ ನೀಡಲಾಗುತ್ತದೆ, ಏನು ಪ್ರಯೋಜನ?
ಈ ಹಿಂದೆ ಯಾವಾಗ ಏರಿಕೆಯಾಗಿತ್ತು ದರ?
2022ರ ಆಗಸ್ಟ್ 11ರಿಂದ ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಲೀಟರ್ಗೆ ₹1 ಹೆಚ್ಚಿಸಲು ಒಕ್ಕೂಟದ 421ನೇ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆ.11ರಿಂದ ಒಕ್ಕೂಟದಿಂದ ಸಂಘಗಳಿಗೆ ₹30.06 ಹಾಗೂ ಸಂಘದಿಂದ ಉತ್ಪಾದಕರಿಗೆ ₹28.20 ದರ ಏರಿಕೆ ಮಾಡಲಾಗಿತ್ತು.