ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಿಯೊನಿಕ್ಸ್ (keonics) ಸಂಸ್ಥೆಯಿಂದ ಉದ್ಯೋಗ ಆಧಾರಿತ ಕೋರ್ಸ್ ಒದಗಿಸಿದ್ದು, ಇದರ ಪ್ರಯೋಜನ ಪಡೆಯುವಂತೆ ಕಿಯೊನಿಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವಿ ಡಿ.ಚನ್ನಣ್ಣನವರ್ ಸಲಹೆ ನೀಡಿದರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಚಿರಾಗ್ ಇನ್ಫೋಟೆಕ್, ಎಂಬಿಎ ಮತ್ತು ಎಂಸಿಎ ವಿಭಾಗದ ವತಿಯಿಂದ ಏರ್ಪಡಿಸಿದ್ದ ಕಿಯೋನಿಕ್ಸ್ ಸಂಸ್ಥೆಯ ಉನ್ನತ ತರಬೇತಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಏನೆಲ್ಲ ಕೋರ್ಸ್ ಲಭ್ಯ?
ಐಐಟಿ, ಐಐಎಂ ಪ್ರೊಫೆಸರ್ ಗಳಿಂದ ಕೃತಕ ಬುದ್ಧಿಮತ್ತೆ, ಐಓಟಿ, ಸೈಬರ್ ಸೆಕ್ಯುರಿಟಿ ಸೇರಿದಂತೆ ಅನೇಕ ತಾಂತ್ರಿಕ ಉನ್ನತ ಕೋರ್ಸ್ಗಳನ್ನು ಒದಗಿಸುತ್ತಿದೆ. ಜೊತೆಗೆ ಉನ್ನತ ಉದ್ಯೋಗವಕಾಶಗಳನ್ನು ಕೋರ್ಸ್ ಮುಗಿಸಿದ ವಿದ್ಯಾರ್ಥಿಗೆ ನೀಡಲಾಗುತ್ತದೆ. ಈ ಮೂಲಕ ಸಾಮಾನ್ಯ ಮತ್ತು ಗ್ರಾಮೀಣ ಪ್ರದೇಶದ ಯುವ ಸಮೂಹದ ಸಬಲೀಕರಣ ಸಾಧ್ಯವಾಗಲಿದೆ. ಕಿಯೋನಿಕ್ಸ್ ಪೂರಕ ವೇದಿಕೆಗಳನ್ನು ಬಳಸಿಕೊಳ್ಳಿ ಎಂದರು.
READ | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಅವಕಾಶಗಳ ಬಗ್ಗೆ ಸಂಸದ ರಾಘವೇಂದ್ರ ಹೇಳಿದ್ದೇನು?
ವಿದ್ಯಾರ್ಥಿಗಳಿಗೆ ಸಲಹೆ
- ಸಮಯ ಮತ್ತು ಅವಕಾಶ ಬದುಕಿನಲ್ಲಿ ಅಮೂಲ್ಯವಾದದ್ದು. ಓದುವ ಸಮಯ, ಸಾಧಿಸುವ ಅವಕಾಶ ಸದಾ ಬದುಕಿನಲ್ಲಿ ಸಿಗುವುದಿಲ್ಲ. ಸಿಗುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ.
- ಜೀವನದಲ್ಲಿ ಏನೇ ಸಾಧನೆ ಸಾಧ್ಯವಾಗುತ್ತದೆ ಎಂದಾದರೇ ಅದು ನಮ್ಮ ಓದಿನ ಹಪಾಹಪಿಯಿಂದ ಮಾತ್ರ. ಹಿಂದೆ ಯಾಗಗಳ ಮೂಲಕ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸಲಾಗುತ್ತಿತ್ತು. ಇಂದು ವಿದ್ಯೆಯ ಮೂಲಕ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಯಾಗ ನಡೆಯುತ್ತಿದೆ.
- ಈ ಜಗತ್ತಿನಲ್ಲಿ ಪೋಲೀಸರಿಗೆ ಇರುವಷ್ಟು ಅವಕಾಶ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ಈ ಜಗತ್ತಿಗೆ ಶಾಂತಿಯ ಅವಶ್ಯಕತೆಯಿದೆ. ಅಂತಹ ಶಾಂತಿ ಮತ್ತು ಸುಭದ್ರತೆ ಕಾಪಾಡುವಲ್ಲಿ ಪೋಲೀಸರ ಪಾತ್ರ ಮಹತ್ವದಾಗಿದೆ.
ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಸಂಸ್ಥೆಯ ಆಯೋಜಕ ನಿರ್ದೇಶಕರಾದ ಕುಮಾರ್.ಪಿ, ಕೋರ್ಸ್ ನಿರ್ದೇಶಕ ಡಾ.ಸರೀತ್ ಕುಮಾರ್, ಜೆ.ಎನ್.ಎನ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರ ಪ್ರಸಾದ್, ಡಿವೈಎಸ್ಪಿ ಸುರೇಶ್, ಚಿರಾಗ್ ಇನ್ಫೊಟೆಕ್ ಡಿ.ಪಿ.ಗಿರೀಶ್, ಎಂಸಿಎ ವಿಭಾಗದ ನಿರ್ದೇಶಕ ಡಾ.ಪ್ರಭುದೇವ, ಎಂಬಿಎ ವಿಭಾಗದ ನಿರ್ದೇಶಕ ಡಾ.ಶ್ರೀಕಾಂತ್, ಸಹ ಪ್ರಾಧ್ಯಾಪಕ ಪ್ರಶಾಂತ್ ಅಂಕಲಕೋಟಿ, ವಿಕ್ರಮ್ ಇತರರು ಉಪಸ್ಥಿತರಿದ್ದರು.
https://suddikanaja.com/2023/02/03/science-museum-at-sahyadri-college-shivamogga/