
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಮಾರ್ಚ್ 17 ರಿಂದ 20ರ ವರೆಗೆ ನಾಲ್ಕು ದಿನಗಳ ಕೃಷಿ ಮತ್ತು ತೋಟಗಾರಿಕಾ ಮೇಳ ಆಯೋಜಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಸ್ಥಿರ ಆದಾಯಕ್ಕಾಗಿ- ಸೆಕೆಂಡರಿ ಕೃಷಿ ತಾಂತ್ರಿಕತೆಗಳು ಮತ್ತು ಮೌಲ್ಯವರ್ಧನೆ’ ಧ್ಯೇಯದೊಂದಿಗೆ ನವುಲೆ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಏಳು ಜಿಲ್ಲೆಗಳು ಬರಲಿದ್ದು, ಈಗ ನಡೆಯುತ್ತಿರುವ ಮೇಳ 8ನೇ ಮೇಳವಾಗಿದೆ. ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಕೃಷಿ ಸಚಿವ ಬಿ.ಸಿ.ಪಾಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅತಿಥಿಗಳಾಗಿ ಆಗಮಿಸಲಿರುವರು. ಶಾಸಕ ಕೆ.ಬಿ.ಅಶೋಕನಾಯ್ಕ್ ಅಧ್ಯಕ್ಷತೆ ವಹಿಸುವರು ಎಂದರು.
READ | ಹಂದಿ ಅಣ್ಣಿ ಮರ್ಡರ್ ಕೇಸ್, ಜಾಮೀನು ಮೇಲೆ ಹೊರಬಂದವರ ಮೇಲೆ ಅಟ್ಯಾಕ್
ಯಾವತ್ತು ಯಾವ ಕಾರ್ಯಕ್ರಮ?
- ಮಾರ್ಚ್ 17ರಂದು ತಾಂತ್ರಿಕ ಸಮಾವೇಶದಲ್ಲಿ ಅಡಿಕೆ ಬೇಸಾಯ ಪದ್ಧತಿಗಳು, ಅಡಿಕೆ ಬೆಳೆಯಲ್ಲಿ ಸಮಗ್ರ ಬೆಳೆ ಸಂರಕ್ಷಣೆ, ಬಹು ಬೆಳೆ ಪದ್ಧತಿ, ಮಾರುಕಟ್ಟೆ ಅವಕಾಶಗಳು ಮತ್ತು ಮೌಲ್ಯವರ್ಧನೆ ವಿಷಯಗಳ ಕುರಿತು ಹಾಗೂ ತೋಟಗಾರಿಕಾ ಇಲಾಖೆಯ ಯೋಜನೆಗಳ ವಿಷಯದ ಬಗ್ಗೆ ವಿಜ್ಞಾನಿಗಳು, ಪ್ರಗತಿಪರ ರೈತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದ ನಡೆಯಲಿದೆ.
- ಮಾರ್ಚ್ 18ರಂದು ನಡೆಯಲಿರುವ ಸಮಾವೇಶದಲ್ಲಿ ಗೋಡಂಬಿ ಬೆಳೆಯ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ, ಸಾಂಬಾರು ಬೆಳೆಗಳಲ್ಲಿ ಮೌಲ್ಯವರ್ಧನೆ, ಹಲಸು, ಬಾಳೆ ಹಾಗೂ ಅಡಿಕೆಯಲ್ಲಿ ಕೊಯ್ಲೋತ್ತರ ತಂತ್ರಜ್ಞಾನ ಹಾಗೂ ಮೌಲ್ಯವರ್ಧನೆ, ಕೃಷಿ ನವೋದ್ಯಮ ಮತ್ತು ಸೆಕೆಂಡರಿ ಕೃಷಿ, ಜೇನು ಕೃಷಿ ಮತ್ತು ಮೌಲ್ಯವರ್ಧನೆ, ತೋಟಗಾರಿಕೆ ನರ್ಸರಿ ಮತ್ತು ಮೌಲ್ಯವರ್ಧನೆ, ಕೃಷಿ ಇಲಾಖೆಯ ಕಾರ್ಯಕ್ರಮಗಳ ಕಿರುಪರಿಚಯದ ವಿಷಯದ ಬಗ್ಗೆ ವಿಜ್ಞಾನಿಗಳು, ಪ್ರಗತಿಪರ ರೈತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದ ಏರ್ಪಡಿಸಲಾಗಿದೆ.
- ಮಾರ್ಚ್ 19ರಂದು ಸಿರಿಧಾನ್ಯಗಳು ಆರೋಗ್ಯ ಮತ್ತು ಭವಿಷ್ಯದ ಬೆಳೆ, ಸಮಗ್ರ ಕೃಷಿ ಪದ್ಧತಿ, ಸುಸ್ಥಿರ ಆದಾಯಕ್ಕಾಗಿ ಸಮಗ್ರ ಕೃಷಿ ಪದ್ಧತಿಗಳು, ಸಿರಿಧಾನ್ಯಗಳ ಸಂರಕ್ಷಣೆ ಹಾಗೂ ಮೌಲ್ಯವರ್ಧನೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಪಾತ್ರ ಮತ್ತು ಸಿರಿಧಾನ್ಯಗಳ ವೈವಿಧ್ಯತೆ ಮತ್ತು ಮಾರುಕಟ್ಟೆ ಅವಕಾಶಗಳು ವಿಷಯದ ಬಗ್ಗೆ ವಿಜ್ಞಾನಿಗಳು, ಪ್ರಗತಿಪರ ರೈತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದ ನಡೆಯಲಿದೆ.
ರೈತರಿಗೆ ಸಲಹೆಗಳು
ತಂತ್ರಜ್ಞಾನ ಉದ್ಯಾನವನ, ಸಮಗ್ರ ಕೃಷಿ ಪದ್ಧತಿ, ಸಂರಕ್ಷಿತ ಕೃಷಿ, ಹೈ-ಟೆಕ್ ತೋಟಗಾರಿಕೆ-ಹೈಡ್ರೋಫೋನಿಕ್ ಕೃಷಿ, ಪುಷ್ಪ ಕೃಷಿ, ಜೇನು ಸಾಕಾಣಿಕೆ, ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವ, ಕೃಷಿ-ತೋಟಗಾರಿಕೆ-ಅರಣ್ಯ ಸಮಗ್ರ ಪದ್ಧತಿಗಳು, ಸಾವಯವ ಕೃಷಿ, ಅಣಬೆ ಬೇಸಾಯ, ಪಶುಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು, ಕೊಯ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು, ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು, ಹವಾಮಾನ ಆಧಾರಿತ ಕೃಷಿ, ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಪ್ರದರ್ಶನ, ಶ್ರೇಷ್ಟ ಕೃಷಿಕರು ಮತ್ತು ಕೃಷಿ ಮಹಿಳೆಯರಿಗೆ ಪ್ರಶಸ್ತಿ ಪ್ರಧಾನ, ರೈತರ ಯಶೋಗಾಥೆ ಮತ್ತು ಕೃಷಿ ತಜ್ಞರೊಂದಿಗೆ ಸಂವಾದ, ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ ದೊರೆಯಲಿವೆ.
READ| ಮತ್ತೆ ಕೊರೊನಾಂತಕ, ಶಿವಮೊಗ್ಗ ಸೇರಿ ಹಲವೆಡೆ ಪ್ರಕರಣಗಳಲ್ಲಿ ಹೆಚ್ಚಳ, ರಾಜ್ಯದಲ್ಲಿ ಒಂದು ಸಾವು
ಏಳು ಜಿಲ್ಲೆಗಳಿಂದ ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಾಧನೆಗೈದ ರೈತರು ಮತ್ತು ರೈತ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಅಲ್ಲದೇ ವಿವಿಧ ನವೀನ ತಾಂತ್ರಿಕತೆಗಳು ಮತ್ತು ವಿವಿಧ ಬೆಳೆಗಳ ಹೊಸ ತಳಿಗಳನ್ನು ಮತ್ತು ರೈತ ಸಮೂಹಕ್ಕೆ ಮಾಹಿತಿಗಾಗಿ ವಿವಿಧ ಬೆಳೆ ಹಾಗೂ ತಾಂತ್ರಿಕತೆಗಳನ್ನು ಹೊತ್ತ ತಾಂತ್ರಿಕ ಕೈಪಿಡಿ ಬಿಡುಗಡೆಗೊಳಿಸಲಾಗುವುದು ಎಂದರು.
ಮಾ.20ರ ಬೆಳಗ್ಗೆ 11 ಗಂಟೆಗೆ ನಡೆಯುವ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯವನ್ನು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಸಮಾರಂಭ ಉದ್ಘಾಟಿಸುವರು. ಸಚಿವ ವಿ. ಸುನೀಲ್ ಕುಮಾರ್ ಉತ್ತಮ ಮಳಿಗೆ ಪ್ರಶಸ್ತಿ ಪ್ರದಾನ ಮಾಡುವರು. ಶಾಸಕ ಕೆ.ಬಿ. ಅಶೋಕ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
19ರಂದು ಡಾಗ್ ಶೋ
ಮೇಳದಲ್ಲಿ ಮಾ.19ರ ಬೆಳಗ್ಗೆ 9.30ರಿಂದ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನವನ್ನು ಏರ್ಪಡಿಸಿದ್ದು, ಅತ್ಯುತ್ತಮ ಶ್ವಾನಗಳಿಗೆ ನಗದು ಬಹುಮಾನ ನೀಡಲಾಗುವುದು. ಮಾ.17ರ ಒಳಗೆ ₹199 ಶುಲ್ಕ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9844014063, 94483 18878ರಲ್ಲಿ ಸಂಪರ್ಕಿಸಬಹುದು.
ಮಾಧ್ಯಮಗೋಷ್ಠಿಯಲ್ಲಿ ಕೃಷಿ ವಿವಿ.ಯ ವಿಸ್ತರಣಾ ನಿರ್ದೇಶಕ ಡಾ. ಹೇಮ್ಲಾನಾಯ್ಕ್, ಮೃತ್ಯುಂಜಯ ಸಿ.ವಾಲಿ, ಡೀನ್ ಡಾ. ದುಶ್ಯಂತಕುಮಾರ್ ಇದ್ದರು.
ಶಿವಮೊಗ್ಗಕ್ಕೆ 2 `ಕೃಷಿ ಸಂಜೀವಿನಿ’ ವಾಹನ, ರೈತರಿಗೆ ಸಂಚಾರಿ ಆರೋಗ್ಯ ಚಿಕಿತ್ಸಾಲಯದ ಪ್ರಯೋಜನವೇನು?