ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ವಿಧಾನಸಭಾ ಕ್ಷೇತ್ರ-113 ರಲ್ಲಿ 126568 ಪುರುಷ, 132334 ಮಹಿಳೆ ಮತ್ತು 14 ತೃತೀಯ ಲಿಂಗಿ ಸೇರಿದಂತೆ ಒಟ್ಟು 258916 ಮತದಾರರಿದ್ದಾರೆ ಎಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಎಚ್.ಎನ್.ಚಂದ್ರಕುಮಾರ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟ ಮತದಾರರಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ವೋಟರ್ ಸ್ಲಿಪ್ನ್ನು ವಿತರಿಸುತ್ತಾರೆ. ಏ.13ರಿಂದ 20ರ ವರೆಗೆ ನಾಮಪತ್ರಗಳನ್ನು ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಸ್ವೀಕರಿಸಲಾಗುವುದು ಎಂದರು.
READ | ಗನ್ ಹಿಂಭಾಗದಿಂದ ಹಲ್ಲೆ ಮಾಡಿದ್ದ ಅಜರ್ ಅರೆಸ್ಟ್, ವಿಚಾರಣೆ ವೇಳೆ ಸಿಕ್ಕಿದ್ದೇನು?
ಹೆಚ್ಚುವರಿ ಮತದಾನ ಕೇಂದ್ರಗಳು
113 ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ 286 ಮತದಾನ ಕೇಂದ್ರಗಳಿದ್ದು, 8 ಹೆಚ್ಚುವರಿ ಮತದಾನ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಆಯೋಗದಿಂದ ಅನುಮತಿ ದೊರೆತ ನಂತರದಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುತ್ತದೆ.
ಮಾದರಿ ನೀತಿ ಸಂಹಿತೆ
ಮಾದರಿ ನೀತಿ ಸಂಹಿತೆಯು ಮೇ 13ರ ವರೆಗೆ ಜಾರಿಯಲ್ಲಿರುತ್ತದೆ. ಕೆ.ವಿ ನಾಗರಾಜ್ ರವರು 110-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮಾದರಿನೀತಿ ಸಂಹಿತೆಯ ನೋಡಲ್ ಅಧಿಕಾರಿಯಾಗಿರುತ್ತಾರೆ (944804743)
ಅಂಚೆ ಮತಪತ್ರ ವಿತರಣೆ
80 ವರ್ಷ ವಯೋಮಾನ ಮೀರಿದವರು, ವಿಕಲಚೇತನರು ಮತ್ತು ಕೋಡಿಡ್ 19 ಬಾಧಿತ ಮತದಾರರಿಗೆ ಅಂಚೆ ಮೂಲಕ ಮತದಾನ ಮಾಡಲು ಭಾರತ ಚುನಾವಣಾ ಆಯೋಗವು ಅವಕಾಶವನ್ನು ಕಲ್ಪಿಸಿದೆ. ಸದರಿ ವ್ಯಕ್ತಿಗಳು ಮತದಾನ ಮಾಡುವ ಪ್ರಕ್ರಿಯೆಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ವೀಕ್ಷಿಸಲು ಅವಕಾಶವಿದೆ.
ವಿದ್ಯುನ್ಮಾನ ಮತ ಯಂತ್ರಗಳು
113 ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಜಿಲ್ಲಾಧಿಕಾರಿಗಳು ಬ್ಯಾಲೆಟ್ ಯುನಿಟ್-339, ಕಂಟ್ರೋಲ್ ಯುನಿಟ್-339, ವಿವಿಪ್ಯಾಟ್- 67 ಸರಬರಾಜು ಮಾಡಿದ್ದು ಸುರಕ್ಷಿತೆಗಾಗಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಭದ್ರತಾ ಕೊಠಡಿ ನಿರ್ಮಿಸಿ ಅಲ್ಲಿಡಲಾಗಿದೆ ಎಂದರು.
ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯವನ್ನು ಮೇ 9ರಂದು ಮತ್ತು ಡಿ ಮಸ್ಟರಿಂಗ್ ಕಾರ್ಯವನ್ನು ಮೇ10ರಂದು ನಿರ್ವಹಿಸಲಾಗುತ್ತದೆ.
ಸಹಾಯವಾಣಿ
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧ ಪಟ್ಟಂತ ಸಹಾಯವಾಣಿಯು 24/7 ಕಾರ್ಯನಿರ್ವಹಿಸುತ್ತಿದೆ. ಟೋಲ್ಫ್ರೀ ದೂರವಾಣಿ ಸಂಖ್ಯೆ 1800-4257677 ಗೆ ಸಾರ್ವಜನಿಕರು, ಮತದಾರರು ಚುನಾವಣೆಗೆ ಸಂಬಂಧಿಸಿದ ಮಾದರಿ ನೀತಿ ಸಂಹಿತೆಯ ಅಥವಾ ಯಾವುದೇ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಬಹುದಾಗಿದೆ ಎಂದು ತಿಳಿಸಿದರು.
ಐಎಎಸ್ ಪ್ರೊಬೇಷನರಿ ಅಧಿಕಾರಿ ದಲ್ಜೀತ್ ಕುಮಾರ್, ಡಿವೈಎಸ್ಪಿ ಬಾಲರಾಜ್ ಇದ್ದರು.