ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಐಎಟಿಎ ಕೋಡ್ (IATA Code) ಸಿಕ್ಕಿದ್ದು ನಿಯಮದ ಪ್ರಕಾರ 45 ದಿನಗಳ ಬಳಿಕ ಶಿವಮೊಗ್ಗ ನೆಲ(Shimoga airport) ದಿಂದ ಲೋಹದ ಹಕ್ಕಿ ಹಾರಾಟ ಆರಂಭಿಸಬೇಕು. ಅಂದರೆ, ಜುಲೈ ಹೊತ್ತಿಗೆ ವಿಮಾನ ಸೇವೆ ಜನರಿಗೆ ಪ್ರಾಪ್ತವಾಗಬೇಕು. ಆದರೆ, ಕೆಲವು ಕಾರಣಗಳಿಂದ ವಿಮಾನ ಹಾರಾಟ ಇನ್ನಷ್ಟು ವಿಳಂಬವಾಗಲಿದೆ.
READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ದೊರಕಿತು ಐಎಟಿಎ ಕೋಡ್, ಏನಿದು, ಪ್ರಯೋಜನಗಳೇನು?
ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು
- ಶಿವಮೊಗ್ಗದಿಂದ 78 ಆಸನಗಳ ಎಟಿಆರ್ ವಿಮಾನ ಸೇವೆ (ATR Airline) ಆರಂಭಿಸಲು ನಿರ್ಧರಿಸಲಾಗಿದೆ. ಈಗಾಗಲೇ ಗ್ರಾಹಕರ ಬೇಡಿಕೆಯ ಬಗ್ಗೆ ಮಾರುಕಟ್ಟೆ ಅಧ್ಯಯನ (Market study) ವನ್ನೂ ಸಹ ಮಾಡಲಾಗಿದೆ.
- ಶಿವಮೊಗ್ಗದಿಂದ ಯಾವ ಮಾರ್ಗಕ್ಕೆ ವಿಮಾನ ಯಾನ ಸೇವೆ ಆರಂಭಿಸಬೇಕೆಂಬ ಬಗ್ಗೆ ಟ್ರಾವೆಲ್ ಏಜೆನ್ಸಿಗಳೊಂದಿಗೆ ಚರ್ಚಿಸಲಾಗಿದೆ. ಎಲ್ಲ ಮಾಹಿತಿಗಳನ್ನು ಇಂಡಿಗೋ ಸಂಸ್ಥೆ(indigo corporation limited)ಯ ಆಡಳಿತ ಮಂಡಳಿಗೆ ನೀಡಲಾಗಿದೆ.
- ವಿಮಾನ ನಿಲ್ದಾಣಕ್ಕೆ ಭದ್ರತೆ, ಕೇಂದ್ರದಿಂದ ಅನುಮತಿ, ಎಎಐ(Airports Authority of India )ಗೆ ಹಸ್ತಾಂತರ ಇತ್ಯಾದಿಗಳ ಬಗ್ಗೆ ಚರ್ಚಿಸಲು ರಾಜ್ಯದಲ್ಲಿ ಸರ್ಕಾರ ಇರಲಿಲ್ಲ. ಈಗ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಆ ಎಲ್ಲ ಅಂಶಗಳ ಬಗ್ಗೆ ಗಮನಹರಿಸಲಾಗುವುದು.
- ಶಿವಮೊಗ್ಗ ವಿಮಾನ ನಿಲ್ದಾಣ(Shimoga airport)ವು ಲೋಕಾರ್ಪಣೆಗೊಂಡಾಗಿನಿಂದ ರಾಜಕೀಯ ನಾಯಕರ ಆಗಮನ ಮತ್ತು ನಿರ್ಗಮನಕ್ಕೆ ಅಧಿಕ ಪ್ರಮಾಣದಲ್ಲಿ ಬಳಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi), ಅಮಿತ್ ಶಾ(Amith shah), ರಾಹುಲ್ ಗಾಂಧಿ(Rahul Gandhi), ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಇತರರು ಸೇವೆ ಬಳಸಿದ್ದಾರೆ.
ವಿಮಾನ ಹಾರಾಟ ವಿಳಂಬಕ್ಕೆ ಕಾರಣವೇನು?
ತಾಂತ್ರಿಕವಾಗಿ ಯಾವುದೇ ಸಮಸ್ಯೆಗಳು ಇಲ್ಲ. ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯು ಐಎಟಿಎ ಕೋಡ್ ನೀಡುವ ಮೂಲಕ ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಂಡಾಗಿದೆ. ಇಷ್ಟಾದರೂ ವಿಳಂಬಕ್ಕೆ ಮೂಲ ಕಾರಣ ಮಳೆ.
ಜೂನ್ ಎರಡನೇ ವಾರದಿಂದ ವರ್ಷಧಾರೆ ಶುರುವಾಗಲಿದ್ದು, ಈ ಸಂದರ್ಭದಲ್ಲಿ ವಿಮಾನ ಹಾರಾಟಕ್ಕೆ ವಿಮಾನಯಾನ ಸಂಸ್ಥೆಗಳು ಮುಂದಾಗುವುದಿಲ್ಲ. ಆದುದ್ದರಿಂದ ವಿಮಾನ ಹಾರಾಟಕ್ಕೆ ಸುಮಾರು ಆರು ತಿಂಗಳು ವಿಳಂಬವಾಗುವ ಸಾಧ್ಯತೆ ಇದೆ ಎನ್ನುವುದು ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಯಾವ ಮಾರ್ಗಗಳಲ್ಲಿ ಮೊದಲ ಹಾರಾಟ?
ಇಂಡಿಗೋ ಸಂಸ್ಥೆಯ ಮೂಲಗಳ ಪ್ರಕಾರ, “ಶಿವಮೊಗ್ಗದಿಂದ ಬೆಂಗಳೂರು ಹಾಗೂ ಮುಂಬಯಿ ಮಾರ್ಗಗಳಿಗೆ ವಿಮಾನ ಹಾರಾಟ ಆರಂಭಿಸಲು ನಿರ್ಧರಿಸಲಾಗಿದೆ. ನಂತರ, ಹೈದ್ರಾಬಾರ್, ಗೋವಾ, ಚೆನ್ನೈಗೆ ಶುರು ಮಾಡಲಾಗುವುದು.”
Siddaramaiah | ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ನಿಮಗೇನು ಗೊತ್ತು? ತಿಳಿಯಬೇಕಾದ 6 ವಿಚಾರಗಳಿವು