Yuva nidhi | ಮೋದಿ ಕಾರ್ಯಕ್ರಮಕ್ಕೆ ಮಕ್ಕಳನ್ನು‌ ಕರೆದೊಯ್ಯಬಹುದು, ಯುವನಿಧಿಗೆ ಕರೆಯುವುದರಲ್ಲಿ ತಪ್ಪೇನಿದೆ?

HS Sundresh

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಯುವನಿಧಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕಾಲೇಜುಗಳಿಗೆ ಆಹ್ವಾನ ನೀಡಿದರೆ ಬಿಜೆಪಿಯವರು ವಿರೋಧಿಸುತ್ತಿದ್ದಾರೆ. ಈ ಹಿಂದೆ ವಿಮಾನ ನಿಲ್ದಾಣ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದೇಕೆ? ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಪ್ರಶ್ನಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ‌ ಅವರು, ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ಬಸ್ ಗಳಲ್ಲಿ ಮಕ್ಕಳನ್ನು ಕರೆದುಕೊಂಡು ಬರಲಾಗಿತ್ತು. ಜಿಲ್ಲೆಯ ಪ್ರಗತಿ ಕಾರ್ಯ ಎಂಬ ಕಾರಣಕ್ಕೆ ಕಾಂಗ್ರೆಸ್ ವಿರೋಧಿಸಿರಲಿಲ್ಲ ಎಂದರು.
ಯುವನಿಧಿ ಸರ್ಕಾರದ ಕಾರ್ಯಕ್ರಮವೇ ವಿನಾ ಪಕ್ಷದ್ದಲ್ಲ. ಆದರೆ, ಯೋಜನೆಯ ಲಾಭ ಹೆಚ್ಚು ಜನ‌ ಪಡೆಯಬೇಕೆಂದು ಜಾಗೃತಿ ಮೂಡಿಸಲಾಗುತ್ತಿದೆ. ಐದನೇ ಗ್ಯಾರಂಟಿ ಯೋಜನೆಯನ್ನೂ ಪಕ್ಷ ಜಾರಿಗೆ ತರಲಿದೆ ಎಂದು ತಿಳಿಸಿದರು.

READ |  ಯುವ ನಿಧಿಗೆ ಹೆಸರು ನೋಂದಾಯಿಸುವುದು ಹೇಗೆ? ಇಲ್ಲಿದೆ‌ ಮಹತ್ವದ ಮಾಹಿತಿ

12ರಂದು ಉದ್ಘಾಟನೆ
ರಾಜ್ಯ ಸರ್ಕಾರದ ಐದನೇ ಗ್ಯಾರಂಟಿಯಾದ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಯ ಉದ್ಘಾಟನೆ ಸಮಾರಂಭ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಜ.12ರ ಬೆಳಗ್ಗೆ 11ಕ್ಕೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಮಧುಬಂಗಾರಪ್ಪ, ಡಾ.ಶರಣಪ್ರಕಾಶ್ ಪಾಟೀಲ್, ಡಾ.ಎಂ.ಸಿ. ಸುಧಾಕರ್ ಸೇರಿದಂತೆ ಹಲವು ಸಚಿವರು, ಗಣ್ಯರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ಯುವಕರು ಯುವನಿಧಿಗೆ ಅರ್ಜಿ ಹಾಕಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ 30 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಪ್ರಮುಖರಾದ ಕಲೀಂ ಪಾಶಾ, ಮಂಜುನಾಥ್ ಬಾಬು, ಮಧು ಹೆಚ್.ಎಂ., ಎನ್.ಡಿ.ಪ್ರವೀಣ್‌ಕುಮಾರ್, ಗಿರೀಶ್ ರಾವ್, ಅಫ್ರೀದಿ, ಚಂದನ್ ಮುಂತಾದವರು ಇದ್ದರು.

ಯೋಜನೆ ಹೈಜಾಕ್‌ ಯತ್ನ

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಯುವ ನಿಧಿ ಕಾರ್ಯಕ್ರಮವು ಸರ್ಕಾರದ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ಹೈಜಾಕ್ ಮಾಡಿಕೊಂಡಿದೆ ಮತ್ತು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ಮುಖಂಡ ಎಸ್.ದತ್ತಾತ್ರಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೇಶ್ ಸರ್ಕಾರದ ಕಾಲೇಜುಗಳಿಗೆ ಹೋಗಿ ಶಿಕ್ಷಕರು ಪಾಠ ಮಾಡುವಂತೆ ಮಾಡಿ ಯುವನಿಧಿ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದಾರೆ. ಅಲ್ಲಿನ ಪ್ರಾಂಶುಪಾಲರುಗಳಿಗೂ ಬಲವಂತವಾಗಿ ಯುವಕರನ್ನು ಕಳುಹಿಸುವಂತೆ ಹೇಳುತ್ತಿದ್ದಾರೆ. ಹೀಗೆ ಹೇಳಲು ಅವರಿಗೆ ಯಾರೂ ಅನುಮತಿ ನೀಡಿದವರು. ಅದರಲ್ಲೂ ಪಿಯುಸಿ ಮಕ್ಕಳಿಗೂ ವಿದ್ಯಾನಿಧಿ ಯೋಜನೆಗೂ ಏನು ಸಂಬಂಧವಿದೆ. ಜಿಲ್ಲಾಡಳಿತ ಇದನ್ನು ನೋಡಿ ಕಣ್ಮುಚಿಕೊಂಡು ಕುಳಿತಿದೆ ಎಂದು ಆರೋಪಿಸಿದರು.

error: Content is protected !!