ಮಕ್ಕಳಿಗೆ ಡೆಡ್ಲಿ ವೈರಸ್, ನ್ಯುಮೊಕಾಕಲ್ ನ್ಯುಮೋನಿಯಾ ರೋಗದ ಲಕ್ಷಣಗಳೇನು, ಉಚಿತವಾಗಿ ನೀಡುತ್ತಿರುವ ಲಸಿಕೆ ಪ್ರಯೋಜನ, ಶಿವಮೊಗ್ಗದಲ್ಲಿ ಎಷ್ಟು ಮಕ್ಕಳಿಗೆ ಲಸಿಕೆ?

 

 

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೇಂದ್ರ ಸರ್ಕಾರದ ಸಾರ್ವತ್ರಿಕ ಲಸಿಕೆಯಲ್ಲಿ ಪಿವಿಸಿ 12ನೇ ಲಸಿಕೆಯಾಗಿ ಸೇರ್ಪಡೆಗೊಂಡಿದೆ ಎಂದು ಡಬ್ಲ್ಯುಎಚ್‍ಒ ಸಲಹೆಗಾರ ಡಾ.ಸತೀಶ್ಚಂದ್ರ ಹೇಳಿದರು.
ತುಂಗಾನಗರದ ನಗರ ಪ್ರಸೂತಿ ಆರೋಗ್ಯ ಕೇಂದ್ರದಲ್ಲಿ ನ್ಯೂಮೊಕಾಕಲ್ ಕಾಂಜುಗೇಟ್ ಲಸಿಕೆ(ಪಿಸಿವಿ) ನೀಡಿಕೆ ಕುರಿತು ಗುರುವಾರ ಏರ್ಪಡಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನ್ಯುಮೋಕಾಕಲ್ ರೋಗಾಣು ಶರೀರದ ಬೇರೆ ಬೇರೆ ರೀತಿಯ ರೋಗಗಳಿಗೆ ಕಾರಣವಾಗಬಹುದಾಗಿದೆ. ಐದು ವರ್ಷದ ಒಳಗಿನ ಮಕ್ಕಳಲ್ಲಿ ಈ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ನ್ಯೂಮೋನಿಯಾಗೆ ಸ್ಪ್ರೆಪ್ಟೋಕೋಕಸ್ ನ್ಯೂನಿಯಾ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.

vaccine to children

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

ಮಕ್ಕಳ ಪಾಲಿಗೆ ಮಾರಕ ಈ ರೋಗ
ನ್ಯುಮೊಕಾಕಲ್ ನ್ಯುಮೋನಿಯಾ ಕಡಿಮೆ ಅವಧಿಯ ಉಸಿರಾಟ ಸಂಬಂಧಿಯ ತೀವ್ರ ಪ್ರಮಾಣದ ಸೋಂಕಾಗಿದೆ. ಈ ಸೋಂಕಿನಿಂದ ಶ್ವಾಸಕೋಶಗಳಲ್ಲಿ ಉರಿಯೂತ ಹಾಗೂ ದ್ರವಗಳ ಶೇಖರಣೆ ಉಂಟಾಗುತ್ತದೆ. ಇದರಿಂದಾಗಿ ಸರಾಗವಾಗಿ ಉಸಿರಾಡಲು ಆಗದೆ ಒಳ ಹೋಗುವ ಆಮ್ಲಜನಕ ಪ್ರಮಾಣ ಕಡಿಮೆ ಆಗುತ್ತದೆ. ಮಕ್ಕಳಿಗೆ ಪಿಸಿವಿ ಲಸಿಕೆ ನೀಡಿದರೆ ಈ ಕಾಯಿಲೆಯಿಂದ ಉಂಟಾಗುವ ತೊಂದರೆ ಮತ್ತು ಸಾವನ್ನು ತಡೆಗಟ್ಟಬಹುದು.
ಮಗು ಹುಟ್ಟಿದ ಮೊದಲ ವರ್ಷದಲ್ಲಿ ಗಂಭೀರ ನ್ಯುಮೊಕಾಕಲ್ ಕಾಯಿಲೆ ಕಂಡುಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಉಸಿರಾಡುವಾಗ, ಕೆಮ್ಮುವಾಗ ಅಥವಾ ಸೀನುವಾಗ ವ್ಯಕ್ತಿಯ ಬಾಯಿ ಅಥವಾ ಮೂಗಿನಿಂದ ಹೊರಬೀಳುವ ತುಂತುರುಗಳಿಂದ ಈ ರೋಗ ಹರಡುತ್ತದೆ.

ಸಾಮಾನ್ಯವಾಗಿ ಆರೋಗ್ಯವಂತ ಮಕ್ಕಳು ತಮ್ಮ ರೋಗನಿರೋಧಕ ಶಕ್ತಿಯಿಂದ ಈ ಸೋಂಕಿನ ವಿರುದ್ಧ ಹೋರಾಡಬಹುದು. ಐದು ವರ್ಷದ ಒಳಗಿನ ವಿಶೇಷವಾಗಿ ಎರಡು ವರ್ಷದೊಳಗಿನ ಮಕ್ಕಳು ಈ ರೋಗಕ್ಕೆ ಸಿಲುಕಿ ಬಲಿಯಾಗುವ ಸಾಧ್ಯತೆ ಹೆಚ್ಚಿದೆ. ಶೇ.15 ರಿಂದ 17 ರಷ್ಟು 2 ವರ್ಷದೊಳಗಿನ ಮಕ್ಕಳು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ.

ಪಿಸಿವಿ ಲಸಿಕೆಯು ಚಿಕ್ಕ ಮಕ್ಕಳನ್ನು ನ್ಯುಮೋನಿಯಾ ಕಾಯಿಲೆಯಿಂದ ರಕ್ಷಿಸುತ್ತದೆ. ಈ ಲಸಿಕೆ ಸುರಕ್ಷಿತವಾಗಿದ್ದು ಈಗಾಗಲೇ ಜಗತ್ತಿನ 146 ದೇಶಗಳಲ್ಲಿ ನೀಡಲಾಗುತ್ತಿದೆ. 2017 ರಿಂದ ನಮ್ಮ ದೇಶದ 5 ರಾಜ್ಯಗಳಲ್ಲಿ ಈ ಲಸಿಕೆ ನೀಡಲಾಗುತ್ತಿದ್ದು ಈ ರಾಜ್ಯಗಳಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ಪ್ರಕರಣಗಳು ಅತ್ಯಂತ ಕಡಿಮೆ ಇದೆ.
ಸುಮಾರು 20 ವರ್ಷಗಳಿಂದ ಖಾಸಗಿಯಾಗಿ ಈ ಲಸಿಕೆ ಲಭ್ಯವಿದ್ದು, ಇದರ ವೆಚ್ಚ ಸುಮಾರು 4 ರಿಂದ 6 ಸಾವಿರ ಆಗಲಿದೆ. ಆದರೆ, ಕೇಂದ್ರ ಸರ್ಕಾರ ಇದೀಗ ಸಾರ್ವತ್ರಿಕ ಲಸಿಕಾಕರಣದಲ್ಲಿ ಈ ಲಸಿಕೆಯನ್ನು ಸೇರ್ಪಡೆಗೊಳಿಸಿದ್ದು ಸಂಪೂರ್ಣ ಉಚಿತವಾಗಿ ಮಗುವಿಗೆ ಒಂದೂವರೆ ತಿಂಗಳಿಗೆ, ಮೂರೂವರೆ ತಿಂಗಳಿಗೆ ಮತ್ತು ಒಂಭತ್ತು ತಿಂಗಳಿಗೆ(ಬೂಸ್ಟರ್ ಡೋಸ್) ಹೀಗೆ ಮೂರು ಡೋಸ್ ಗಳಲ್ಲಿ ನೀಡುತ್ತಿದೆ ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ 24,284 ಮಕ್ಕಳಿಗೆ ಲಸಿಕೆ

ಆರ್.ಸಿಎಚ್.ಒ ಡಾ.ನಾಗರಾಜ್ ನಾಯ್ಕ್ ಮಾತನಾಡಿ, ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ 2021-22 ನೇ ಸಾಲಿಗೆ ಒಟ್ಟು 24,284 ಮಕ್ಕಳಿಗೆ ಸಾರ್ವತ್ರಿಕ ಲಸಿಕಾಕರಣದಲ್ಲಿ ಈ ಲಸಿಕೆ ನೀಡಲಾಗುವುದು. ಕೋವಿಡ್ 19 ಲಸಿಕೆ ಅಭಿಯಾನ ಮುಂದುವರೆಯುವುದರ ಜೊತೆಗೆ ಆರೋಗ್ಯ ಇಲಾಖೆ ಪಿಸಿವಿ ಅಭಿಯಾನಕ್ಕೆ ಸಿದ್ದತೆ ನಡೆಸಿದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಮಕ್ಕಳಿಗೆ(ಐದು ವರ್ಷದೊಳಗಿನ) ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಡಿಎಚ್.ಒ ಡಾ. ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಓ.ಮಲ್ಲಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ಡಾ.ಭೀಮಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎ. ಅಕ್ತಾರ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರತಿಮಾ ಉಪಸ್ಥಿತರಿದ್ದರು.

https://www.suddikanaja.com/2021/07/22/national-highway-in-worst-condition-which-connect-through-western-ghat/

error: Content is protected !!