Police meeting | ಪಿಜಿ, ಹೋಮ್ ಸ್ಟೇ, ಹಾಸ್ಟೆಲ್ ಗಳಿಗೆ ಹೊಸ ರೂಲ್ಸ್, ಎಸ್.ಪಿ ನೀಡಿದ 8 ಸೂಚನೆಗಳೇನು?

shivamogga city

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
(POLICE MEETING) SHIVAMOGGA: ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ‌ ಜಿ.ಕೆ. ಮಿಥುನ್ ಕುಮಾರ್ (GK Mithun kumar) ನೇತೃತ್ವದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲೆಯ ಎಲ್ಲಾ ಪಿಜಿ (ಪೇಯಿಂಗ್ ಗೆಸ್ಟ್), ಹೋಮ್ ಸ್ಟೇ ಮತ್ತು ಖಾಸಗಿ ವಸತಿ ನಿಲಯಗಳ ಮಾಲೀಕರು ಹಾಗೂ ವ್ಯವಸ್ಥಾಪಕರ ಸಭೆ ನಡೆಸಲಾಯಿತು. ಈ ವೇಳೆ‌ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.

READ | ಮಾಹಿತಿ ಸಿಕ್ಕಿದ್ದೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಶಾಕ್

ಎಸ್.ಪಿ ನೀಡಿದ ಸೂಚನೆಗಳೇನು?
1. ಪಿಜಿ , ಹೋಮ್ ಸ್ಟೇ, ಖಾಸಗಿ ವಸತಿ ನಿಲಯಗಳನ್ನು ನಡೆಸುವವರು ಸ್ಥಳೀಯ ಸಂಸ್ಥೆ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಕಡ್ಡಾಯವಾಗಿ ಪರವಾನಿಗೆ ಮತ್ತು ನಿರಾಕ್ಷೇಪಣಾ ಪತ್ರವನ್ನು ಪಡೆದುಕೊಳ್ಳಬೇಕು.
2. ಕಡ್ಡಾಯವಾಗಿ ಗುರುತಿನ ಚೀಟಿ (ಫೋಟೋ ಐಡಿ ಕಾರ್ಡ್)ಯನ್ನು ಪಡೆದುಕೊಂಡು, ಅವರ ಪೂರ್ವಾಪರವನ್ನು ಪರಿಶೀಲಿಸಿ ನಂತರ ಉಳಿದುಕೊಳ್ಳಲು ಅನುಮತಿಸುವುದು ಮತ್ತು ಸದರಿಯವರ ಮಾಹಿತಿಯನ್ನು ಕಡ್ಡಾಯವಾಗಿ ರಿಜಿಸ್ಟರ್ ನಲ್ಲಿ ನಮೂದು ಮಾಡುವುದು. ಅಂತಹ ಮಾಹಿತಿ ರಿಜಿಸ್ಟರ್ ಅನ್ನು ಕನಿಷ್ಠ 5 ವರ್ಷಗಳವರೆಗೆ ಸುರಕ್ಷಿತವಾಗಿಡಬೇಕು. ತಿಂಗಳಿಗೊಮ್ಮೆ ಆ ವಿವರಗಳನ್ನು ಸರಹದ್ದಿನ ಪೊಲೀಸ್ ಠಾಣೆಗೆ ಸಲ್ಲಿಸಬೇಕು.
3. ಸುರಕ್ಷತೆಯ ದೃಷ್ಟಿಯಿಂದ ಪಿಜಿ ಹೋಮ್ ಸ್ಟೇ, ಖಾಸಗಿ ವಸತಿ ನಿಲಯಗಳ ಒಳ ಮತ್ತು ಹೊರ ಭಾಗ ಕಾಣುವ ರೀತಿಯಲ್ಲಿ ಹಾಗೂ ನೈಟ್ ವಿಷನ್ ಇರುವಂತಹ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು.
4. ಕನಿಷ್ಠ 3 ತಿಂಗಳವರೆಗೆ ಸಂಗ್ರಹಣಾ ಸಾಮರ್ಥ್ಯವಿರುವ ಹಾರ್ಡ್ ಡಿಸ್ಕ್ ಗಳನ್ನು ಅಳವಡಿಸಿರಬೇಕು. ಸಿಸಿ ಟಿವಿ ಕ್ಯಾಮೆರಾದ ಲೈವ್ ಸ್ಟ್ರೀಮಿಂಗ್ ಗಮನಿಸಲು ಮಾನಿಟರ್ ಗಳನ್ನು ಇಟ್ಟುಕೊಳ್ಳುವುದು ಸೂಕ್ತ.
5. ಇಪ್ಪತ್ತಕ್ಕಿಂತ ಹೆಚ್ಚು ಜನರು ಉಳಿದುಕೊಂಡಿದ್ದಲ್ಲಿ ಕಡ್ಡಾಯವಾಗಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಭದ್ರತಾ ಸಿಬ್ಬಂದಿ ಪೂರ್ವಾಪರ ಪರಿಶೀಲಿಸಿ ಅಧಿಕೃತ ನೋಂದಾಯಿತ ಸಂಸ್ಥೆಗಳ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು.
6. ಸಂಬಂಧಪಟ್ಟ ಪೊಲೀಸ್ ಠಾಣೆಗಳವರು ತಮ್ಮ ಸರಹದ್ದಿನ ವ್ಯಾಪ್ತಿಗೆ ಒಳಪಡುವ ಪಿಜಿ, ಹೋಮ್ ಸ್ಟೇ , ಖಾಸಗಿ ವಸತಿ ನಿಲಯಗಳಲ್ಲಿ ಬೀಟ್ ಬುಕ್ ಗಳನ್ನು ನಿರ್ವಹಿಸಿ ಕಡ್ಡಾಯವಾಗಿ ಬೀಟ್ ಜಾರಿ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
7. ಹೊರ ರಾಜ್ಯದವರು ಉಳಿದುಕೊಂಡಿದ್ದಲ್ಲಿ ಅವರ ಮೂಲ ವಿಳಾಸದ ಗುರುತಿನ ಚೀಟಿ / ಫೋಟೋ ಐಡಿ ಕಾರ್ಡ್ ಹಾಗೂ ಇತರೆ ಯಾವುದಾದರೂ ಅಧಿಕೃತ ದಾಖಲೆಗಳನ್ನು ಪಡೆದುಕೊಂಡು, ಅವರ ಸಂಪೂರ್ಣ ವಿವರವನ್ನು ಮತ್ತು ಇಲ್ಲಿಗೆ ಬಂದಿರುವ ಉದ್ದೇಶವನ್ನು ರಿಜಿಸ್ಟರ್ ನಲ್ಲಿ ನಮೂದು ಮಾಡಿಕೊಳ್ಳಬೇಕು.
8. ವಿಶೇಷವಾಗಿ ಮಹಿಳಾ ವಸತಿ ನಿಲಯಗಳ ಮಾಲೀಕರು ಮತ್ತು ವ್ಯವಸ್ಥಾಪಕರು ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ವಿಶೇಷ ಮುತುವರ್ಜಿ ವಹಿಸಿ ನೋಂದಣಿ, ರಿಜಿಸ್ಟರ್ ನಿರ್ವಹಣೆ, ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳಬೇಕು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ, ಶಿವಮೊಗ್ಗ –ಎ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಬಾಬು ಆಂಜನಪ್ಪ, ಶಿವಮೊಗ್ಗ –ಬಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಸುರೇಶ್ ಭದ್ರಾವತಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ನಾಗರಾಜ್, ಸಾಗರ ಪೊಲೀಸ್ ಉಪಾಧೀಕ್ಷಕ ಗೋಪಾಲ ಕೃಷ್ಣ ಟಿ.ನಾಯ್ಕ್ ಇತರರು‌ ಉಪಸ್ಥಿತರಿದ್ದರು.

error: Content is protected !!