ಶಿವಮೊಗ್ಗದಲ್ಲಿ ಕುರಿಗಳ ಸಾಮೂಹಿಕ ಸಾವು, ಹೃದಯವಿದ್ರಾವಕ ಘಟನೆಯ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ವಾರ್

 

 

ಸುದ್ದಿ ಕಣಜ.ಕಾಂ‌ | KARNATAKA | POLITICAL NEWS
ಶಿವಮೊಗ್ಗ: ನಗರದ ಸಾಗರ ರಸ್ತೆಯಲ್ಲಿ ಸಾಮೂಹಿಕವಾಗಿ ಕುರಿಗಳು ಮೃತಪಟ್ಟಿದ್ದು, ಈ‌ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕುರಿಗಳ ಸಾಮೂಹಿಕ ಸಾವಿಗೆ Enterotoxemia ಕಾಯಿಲೆ ಕಾರಣ ಎಂದು ಶಂಕಿಸಲಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕುರಿಗಾಯಿ ವಾಸಪ್ಪ ಮಾನಿ ಎಂಬುವವರು 35 ಕುರಿಗಳನ್ನು ಮೇಯಿಸಿಕೊಂಡು ಶಿವಮೊಗ್ಗಕ್ಕೆ ಬಂದಿದ್ದಾರೆ. ಆಗ ಕುರಿಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಮೃತಪಟ್ಟಿವೆ.

siddaramaiah tweet

READ | ಶಿಕ್ಷಣ ಸಚಿವರ ಸಮ್ಮುಖದಲ್ಲಿ ಕಪ್ಪು ಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ, ಶಾಲೆ ಬಹಿಷ್ಕಾರದ ಎಚ್ಚರಿಕೆ, ಕಾರಣವೇನು

ಸಿದ್ದರಾಮಯ್ಯ ಟ್ವೀಟ್ ಸೃಷ್ಟಿಸಿದೆ ಸಂಚಲನ
ಕುರಿಗಳು ಮೃತಪಟ್ಟಿದ್ದು ಅವುಗಳ‌ ಅಂತ್ಯಸಂಸ್ಕಾರ ಕೂಡ ಮಾಡಲಾಗಿದೆ. ಆದರೆ, ಇದನ್ನೇ ಜೀವನವಾಗಿಸಿಕೊಂಡಿರುವ ಕುರಿಗಾಯಿ ವಾಸಪ್ಪ ದಿಕ್ಕೆಟ್ಟಿದ್ದಾರೆ. ಬದುಕಿಗೆ ಆಧಾರವಾದ ಕುರಿಗಳು ಏಕಾಏಕಿ ಮೃತಪಟ್ಟಿರುವುದರಿಂದ ಸಂಕಷ್ಟದಲ್ಲಿದ್ದಾರೆ.
ಈ ಕುರಿತು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು ಅದೀಗ ರಾಜಕೀಯ ವಲಯದಲ್ಲಿ ಸಂಚಲನವನ್ನೇ ಮೂಡಿಸಿದೆ.
ಸಿದ್ದರಾಮಯ್ಯ ಅವರ ಟ್ವೀಟ್ ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿದ್ದ ‘ಅನುಗ್ರಹ’ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ‌ ಯೋಜನೆಯನ್ನು ಬಿಜೆಪಿ ಅಧಿಕಾರಕ್ಕೆ‌ಬಂದ ಬಳಿಕ ಸ್ಥಗಿತಗೊಳಿಸಿದೆ. ಒಂದುವೇಳೆ, ಈ ಯೋಜನೆ ಜಾರಿಯಲ್ಲಿದ್ದಿದ್ದರೆ ಅದರಡಿ ಸಂಕಷ್ಟದಲ್ಲಿರುವ ಕುರಿಗಾಹಿಗೆ ಪರಿಹಾರ ನೀಡಬಹುದಿತ್ತು ಎಂದು ತಿಳಿಸಿದ್ದಾರೆ.

READ | ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ದರ, ರಾಶಿ ಅಡಿಕೆಗೆ ಶಿವಮೊಗ್ಗದಲ್ಲೇ ಅಧಿಕ ಬೆಲೆ

ಟ್ವೀಟ್ ನಲ್ಲಿ‌ ಏನಿದೆ?
‘ಶಿವಮೊಗ್ಗದಲ್ಲಿ ಚಿಕ್ಕೋಡಿ ತಾಲೂಕಿನ ಕುರಿಗಾಯಿ ನಾಯಿಂಗ್ಲಾಜ್ ವಾಸಪ್ಪ ಮಾನಿ ಅವರಿಗೆ ಸೇರಿದ ಸುಮಾರು 40 ಕುರಿಗಳು ಸಾವನ್ನಪ್ಪಿವೆ. ಇಂತಹವರಿಗೆ ನೆರವಾಗಲೆಂದೇ ನಾನು ಜಾರಿಗೆ ತಂದಿದ್ದ ‘ಅನುಗ್ರಹ’ ಯೋಜನೆಯನ್ನು ಸ್ಥಗಿತಗೊಳಿಸಿದ್ದ ಬಿಜೆಪಿ ಸರ್ಕಾರವನ್ನು ಕಟುಕರ ಸರ್ಕಾರ ಎನ್ನದೆ ಬೇರೆ ಹೇಗೆ ಕರೆಯೋಣ?’
‘ಕುರಿಗಾಯಿಗಳ ಓಟಿನ ಬೇಟೆಗಾಗಿ‌ ಕಂಬಳಿ ಹೊದ್ದು ಚುನಾವಣಾ ಪ್ರಚಾರ ನಡೆಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ, ಈ ನಾಟಕ ನಿಲ್ಲಿಸಿ. ನಿಮಗೆ ಕುರಿಗಾಯಿಗಳ ಬಗ್ಗೆ ಕಾಳಜಿ ಇದ್ದರೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ‘ಅನುಗ್ರಹ’ ಯೋಜನೆಗೆ ಹಣ ಒದಗಿಸಿ. ಪಶುಗಳನ್ನು‌‌ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿ’ ಎಂದು‌‌ ಆಗ್ರಹಿಸಿದ್ದಾರೆ.

https://www.suddikanaja.com/2020/11/10/tweet-traffic/

error: Content is protected !!