ಕಂಪ್ಲೀಟ್ ಮಾಹಿತಿ: ಕಾಲೇಜು‌ ಬರುವ ಮುನ್ನ ಕೋವಿಡ್ ಟೆಸ್ಟ್ ಕಡ್ಡಾಯ, ಎಲ್ಲೆಲ್ಲಿದೆ ಅವಕಾಶ, ಯಾವಾಗ ಸಿಗುತ್ತೆ ರಿಪೋರ್ಟ್?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇಂದಿನಿಂದ ವೃತ್ತಿಪರ ಕೋರ್ಸ್’ಗಳಾದ ಡಿಪ್ಲೋಮಾ, ಎಂಜಿನಿಯರಿಂಗ್ ಹಾಗೂ ಪದವಿ, ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳ ತರಗತಿ ಆರಂಭವಾಗಲಿವೆ. ಆದರೆ, ಕಡ್ಡಾಯವಾಗಿ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಗೆ ಒಳಪಡುವಂತೆ ಸರ್ಕಾರ ಸೂಚನೆ ನೀಡಿದೆ. ಅದರನ್ವಯ, ಶಿವಮೊಗ್ಗದಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಿಂದ ಪೂರ್ವ ತಯಾರಿಗಳನ್ನು ಮಾಡಿಕೊಂಡಿದೆ.
ಇದಕ್ಕೋಸ್ಕರವಾಗಿವೇ ಆರೋಗ್ಯಇಲಾಖೆಯಿಂದ ಶಿವಮೊಗ್ಗ ನಗರದಲ್ಲಿ 23 ಸೇರಿ ಜಿಲ್ಲೆಯಲ್ಲಿ ಒಟ್ಟು 56 ತಂಡಗಳನ್ನು ನಿಯೋಜಿಸಲಾಗಿದೆ. ಅವರು ಕಾಲೇಜುಗಳಿಗೆ ಭೇಟಿ ನೀಡಿ ಮಾದರಿಯನ್ನು ಸಂಗ್ರಹಿಸಲಿದ್ದಾರೆ. ಪ್ರಸಕ್ತ 25 ಕಾಲೇಜುಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ. ಕಾಲೇಜು ಆಡಳಿತ ಮಂಡಳಿಯವರು ಮಾಹಿತಿ ನೀಡಿದ ಬಳಿಕ ಅಲ್ಲಿಗೆ ಭೇಟಿ ನೀಡಿ ಮಾದರಿ ಸಂಗ್ರಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಒಂದುವೇಳೆ, ಕಾಲೇಜಿಗೆ ಬಾರದೇ ಗೈರಾದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿ.ಎಚ್.ಸಿ)ಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು. ಅದರ ಜವಾಬ್ದಾರಿಯನ್ನು ಆಯಾ ತಾಲೂಕು ಆರೋಗ್ಯ ಅಧಿಕಾರಿಗೆ ವಹಿಸಲಾಗಿದೆ.
ಎಲ್ಲರ ಪರೀಕ್ಷೆಗೆ ಬೇಕು ಕನಿಷ್ಠ 3 ದಿನ: ಎಲ್ಲ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಕನಿಷ್ಠ 2-3 ದಿನ ಬೇಕು. ಒಬ್ಬರ ಮಾದರಿ ಸಂಗ್ರಹಕ್ಕೆ 6-7 ನಿಮಿಷ ತಗಲುತ್ತದೆ. 200-300 ವಿದ್ಯಾರ್ಥಿಗಳಿರುವ ಕಾಲೇಜಿಗೆ ಅದೂ ಏಕ ಕಾಲಕ್ಕೆ ಮಾಡಲಾಗದು. ಅಂತಹ ಕಡೆ ಬೇರೆ ಬೇರೆ ಶಿಫ್ಟ್ ಮಾಡಬೇಕಾಗುತ್ತದೆ. ಇದಕ್ಕಾಗಿ ಕನಿಷ್ಠ 2-3 ಗಂಟೆ ಬೇಕು. ಬಳಿಕ ಆ ಎಲ್ಲ ಮಾದರಿಗಳನ್ನು ಶಿವಮೊಗ್ಗದಲ್ಲಿರುವ ಆರ್.ಟಿ-ಪಿಸಿಆರ್ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಸಾಧ್ಯವಾದಷ್ಟು ಶೀಘ್ರ ಗತಿಯಲ್ಲಿ ಪರೀಕ್ಷೆ ಫಲಿತಾಂಶ ನೀಡಲಾಗುವುದು. ಮಾದರಿ‌ ಸಂಗ್ರಹಿಸುವಾಗಲೇ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆ ತೆಗೆದುಕೊಳ್ಳುವುದರಿಂದ ಅಲ್ಲಿಯೇ ಮಾಹಿತಿ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!