ಸುದ್ದಿ ಕಣಜ.ಕಾಂ | DISTRICT | SHIVAMOGGA AIRPORT
ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ (shivamogga airport) ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ನವೆಂಬರ್ ಅಂತ್ಯಕ್ಕೆ ವಿಮಾನ ಹಾರಾಟ ಸಾಧ್ಯತೆ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸೋಗಾನೆಯಲ್ಲಿ ನಿರ್ಮಿಸುತ್ತಿರುವ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿದ ಸಂಸದರು, ಕಾಮಗಾರಿಗಳನ್ನು ವೀಕ್ಷಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಬೆಂಗಳೂರು (Bangalore) ನಂತರದ ಅತ್ಯಂತ ಉದ್ದವಾದ 3,200ಮೀಟರ್ ರನ್ ವೇಯನ್ನು ಈ ವಿಮಾನ ನಿಲ್ದಾಣ ಹೊಂದಿದೆ. ಈ ಅತ್ಯಾಧುನಿಕ ಸೌಲಭ್ಯಗಳು ಇರುವುದರಿಂದಾಗಿ ವಿಮಾನಯಾನ ಸಂಸ್ಥೆಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
- ವಿಮಾನ ನಿಲ್ದಾಣದ ಒಟ್ಟು 3,200 ಮೀಟರ್ ರನ್ ವೇಯಲ್ಲಿ 1,500 ಮೀಟರ್ ರನ್ ವೇ ಈಗಾಗಲೇ ಪೂರ್ಣಗೊಂಡಿದೆ. ಉಳಿದ ರನ್ವೇ (Run way) ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಜೂನ್-ಜುಲೈಗೆ ಪೂರ್ಣಗೊಳ್ಳಲಿದೆ. ವಿಮಾನ ನಿಲ್ದಾಣದ ಎರಡೂ ಕಡೆಗಳಲ್ಲಿ 2 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, ಕುಡಿಯುವ ನೀರು ಮತ್ತು ರಸ್ತೆ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ.
- ಟರ್ಮಿನಲ್ ಕಟ್ಟಡ, ಎ.ಟಿ.ಸಿ. ಕಟ್ಟಡ ಆಗಸ್ಟ್-ಸೆಪ್ಟಂಬರ್ ಮಾಸಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದರೊಂದಿಗೆ ಇತರೆ ಪರಿಶೀಲನೆ, ಪರವಾನಗಿ ಮುಂತಾದ ಪ್ರಕ್ರಿಯೆಗಳು ನಡೆಯಲಿದೆ.
- ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ಏರ್ ಬಸ್ (air bus)ಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಹಗಲು-ಇರುಳು ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ ನಿಲ್ದಾಣವನ್ನು ವಿನ್ಯಾಸಗೊಳಿಸಿ ಸೌಲಭ್ಯ ಕಲ್ಪಿಸಲಾಗುತ್ತಿದೆ.
- ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯವೂ ಭರದಿಂದ ಸಾಗಿದೆ. ಟರ್ಮಿನಲ್ ಕಟ್ಟಡ ಮತ್ತಿತರ ಎಲ್ಲ ಸೌಲಭ್ಯಗಳೂ ಪೂರ್ಣಗೊಳ್ಳಬೇಕಾಗಿದೆ. ನಿಲ್ದಾಣಕ್ಕೆ ಸಂಪರ್ಕ ಸೌಲಭ್ಯ ಕಲ್ಪಿಸುವ ಸಂಬಂಧ ಇಲಾಖೆಗಳಿಂದ ಪರವಾನಗಿ ಪಡೆಯಬೇಕಾಗಿದ್ದು, ಇದಕ್ಕಾಗಿ ಕೇಂದ್ರ (central) ಮತ್ತು ರಾಜ್ಯ (state) ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ. ಈ ವಿಮಾನ ನಿಲ್ದಾಣವನ್ನು ದೇಶದ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (airport authority of India) ಅವರಿಗೆ ವಹಿಸಿಕೊಡುವಂತೆ ಕೋರಲಾಗಿದೆ. ಇದರಿಂದ ಎಲ್ಲ ಇಲಾಖೆಗಳ ಪರವಾನಗಿ ಪಡೆಯುವ ಹಾಗೂ ಇತರೆ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಕೆಲಸವನ್ನು ಸಂಸ್ಥೆಯು ನಿರ್ವಹಿಸಲಿದೆ
- ಈಗಾಗಲೇ ಸದರಿ ವಿಮಾನ ನಿಲ್ದಾಣಕ್ಕೆ ದೇಶ-ವಿದೇಶದ ಸಂಪರ್ಕ ಕಲ್ಪಿಸಬಹುದಾದ ಸಾಧ್ಯತೆಗಳ ಕುರಿತು ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಈ ಹಿಂದೆಯೇ ದೆಹಲಿಯಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ, ಯಾವ ಮಾದರಿಯ ವಿಮಾನಗಳನ್ನು ಏರಿಳಿಸಲು ಇರಬಹುದಾದ ಸಾಧ್ಯತೆಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.