ದೂರುದಾತನೇ ದರೋಡೆ ಕಥೆಯ ಸೃಷ್ಟಿಕರ್ತ! ಆ ರಾತ್ರಿ ನಡೆದಿದ್ದೇನು?

 

 

ಸುದ್ದಿ ಕಣಜ.ಕಾಂ
ಸೊರಬ: ತಾಲೂಕಿನ ಆನವಟ್ಟಿ-ಸೊರಬ ಮುಖ್ಯ ರಸ್ತೆಯ ಕೊರಕೋಡು ಕ್ರಾಸ್ ಸಮೀಪ ಇತ್ತೀಚೆಗೆ ನಡೆದ ದರೋಡೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಠಾಣೆಯಲ್ಲಿ ದೂರು ನೀಡಿದವನೇ ದರೋಡೆ ಕಥೆಯ ಸೃಷ್ಟಿಕರ್ತನೆಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ಸಾಗರ ಪಟ್ಟಣದ ನಿವಾಸಿ ಕನ್ನಪ್ಪ (43), ವಿಶ್ವನಾಥ ಅಲಿಯಾಸ್ ವಿಶ್ವ (32), ನಫೀಸ್ ಆಲಂ (35) ಎಂಬುವವರನ್ನು ವಶಕ್ಕೆ ಪಡೆದು, ನ್ಯಾಯಾಂಗಕ್ಕೆ ಬಂಧನಕ್ಕೆ ಒಪ್ಪಿಸಲಾಗಿದೆ‌.
ಲಕ್ಷಾಂತರ ಹಣ ವಶ: 7.50 ಲಕ್ಷ ರೂ. ನಗದು, 1 ಸ್ವಿಫ್ಟ್ ಡಿಸೈರ್ ಕಾರು ಹಾಗೂ ಕಾರಿನಲ್ಲಿದ್ದ 7.50 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆ ರಾತ್ರಿ ನಡೆದಿದ್ದೇನು?: ಕೊಲ್ಲಾಪುರದಿಂದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ 15 ಲಕ್ಷ ರೂ. ನಗದಿನೊಂದಿಗೆ ಆನವಟ್ಟಿ ಮಾರ್ಗವಾಗಿ ಸಾಗರದ ಕಡೆಗೆ ನವೆಂಬರ್ 24ರಂದು ಬರುತ್ತಿದ್ದಾಗ ರಾತ್ರಿ 10-30ರ ಸುಮಾರಿಗೆ ದುಷ್ಕರ್ಮಿಗಳಿಂದ ಕಾರು ತಡೆದು ದರೋಡೆ ಮಾಡಿದ್ದರು.
ಬಳಿಕ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕ ನಫೀಸ್ ಆಲಂ(35) ದೂರು‌ ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ಆಲಂ‌ ಜತೆಗಿದ್ದ ಅನ್ಸರ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ ನಫೀಸ್ ಮಾಡಿರುವ ದೋಖಾ ಬೆಳಕಿಗೆ ಬಂದಿದೆ. ನಂತರ, ಆತನನ್ನು ವಿಚಾರಣೆ ಮಾಡಿದಾಗ ಆತ ಮಾಡಿದ ಮಾಸ್ಟರ್ ಪ್ಲಾನ್ ಗೊತ್ತಾಗಿದೆ.
ರಾತ್ರಿ ಲಕ್ಷಾಂತರ ಹಣದೊಂದಿಗೆ ಬರುತ್ತಿರುವ ವಿಚಾರವನ್ನು ಇನ್ನಿಬ್ಬರಿಗೆ ತಿಳಿಸಿದ್ದೇ ನಫೀಜ್. ಅವರು ಕಾರನ್ನು ಹಿಂಬಾಲಿಸಿಕೊಂಡು ಬಂದು ಕೊರಕೋಡು ಕ್ರಾಸ್ ಸಮೀಪ ಅಡ್ಡಗಟ್ಟಿದ್ದಾರೆ. ಇವರಿಗೆ ಹೆದರಿಸಿ ಈ ಹದಿನೈದು ಲಕ್ಷ ನಗದು ಮತ್ತು ಸ್ವಿಫ್ಟ್ ಡಿಸೈರ್ ಕಾರನ್ನು ಬಲವಂತವಾಗಿ ತೆಗೆದುಕೊಂಡಿದ್ದರು.
ಪ್ರಕರಣ ಬೇಧಿಸಿದ ತಂಡ: ಶಿಕಾರಿಪುರ ಉಪ ವಿಭಾಗದ ಎ.ಎಸ್.ಪಿ ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಸೊರಬ ವೃತ್ತದ ಸಿಪಿಐ ಮರುಳಸಿದ್ದಪ್ಪ, ಶಿಕಾರಿಪುರ ವೃತ್ತದ ಸಿಪಿಐ ಗುರುರಾಜ್ ಮೈಲಾರ್ ನೇತೃತ್ವದಲ್ಲಿ ಆನವಟ್ಟಿ ಠಾಣೆಯ ಪಿಎಸ್.ಐ ಪ್ರವೀಣ್ ಕುಮಾರ್, ಸಿಬ್ಬಂದಿ ಸಿ.ಎಚ್.ಸಿ ಗಿರೀಶ್, ತಿರುಕಪ್ಪ, ಮೂರ್ತಿ, ಸಿಪಿಸಿಗಳಾದ ನಾಗರಾಜ್, ಟೀಕಪ್ಪ, ಚಂದ್ರಾ ನಾಯ್ಕ, ವರದರಾಜ್, ಜಗದೀಶ್, ಬಸಂತಪ್ಪ ಹಾಗೂ ಎಎಚ್.ಸಿ ಬಸವರಾಜ್, ಮಲ್ಲನಗೌಡ, ಕೃಷ್ಣ, ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಪೊಲೀಸ್ ಸಿಬ್ಬಂದಿ ಗುರುರಾಜ್, ಇಂದ್ರೇಶ್, ವಿಜಯ್ ಕುಮಾರ್ ತಂಡ ಕಾರ್ಯಾಚರಣೆ ನಡೆಸಿದೆ.

Leave a Reply

Your email address will not be published. Required fields are marked *

error: Content is protected !!