ಸುದ್ದಿ ಕಣಜ.ಕಾಂ | KARNATAKA | KDP MEETING
ಶಿವಮೊಗ್ಗ: ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆಯನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ತಿಳಿಸಿದರು.
ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಎಷ್ಟು ಮನೆಗಳಿಗೆ ಜಲಜೀವನ್?
ಜಲಜೀವನ್ ಮಿಷನ್ ಪ್ರಥಮ ಹಂತದಲ್ಲಿ 666 ಜನವಸತಿಗಳಿಗೆ ನೀರು ಪೂರೈಸಲು, 626 ಕಾಮಗಾರಿಗಳಿಗೆ ₹148 ಕೋಟಿ ರೂ. ಮಂಜೂರಾಗಿದ್ದು, 591 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಬಾಕಿ ಕಾಮಗಾರಿಗಳು ಅನುಷ್ಠಾನ ಹಂತದಲ್ಲಿವೆ. ಯೋಜನೆಯ ಎರಡನೇ ಹಂತದಲ್ಲಿ 540 ಜನವಸತಿಗಳಿಗೆ ನೀರು ಒದಗಿಸಲು ₹136 ಕೋಟಿ ಮಂಜೂರಾಗಿದ್ದು, ಕಾರ್ಯಾದೇಶ ನೀಡಲಾಗಿರುವ 389 ಕಾಮಗಾರಿಗಳ ಪೈಕಿ 77ಕಾಮಗಾರಿಗಳು ಪೂರ್ಣಗೊಂಡಿವೆ. 3 ಹಂತದಲ್ಲಿ 884 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, 77 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
READ | ಶಿವಮೊಗ್ಗದಲ್ಲಿ ನಡೆಯಲಿದೆ ರಾಜ್ಯಮಟ್ಟದ ವೂಶು ಪಂದ್ಯಾವಳಿ, ವಿಜೇತರಿಗೆ ಆಕರ್ಷಕ ಬಹುಮಾನ
ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಿ
ಫಲಾನುಭವಿಗಳ ಆಯ್ಕೆ, ಟೆಂಡರ್ ಪ್ರಕ್ರಿಯೆಗಳನ್ನು ಎಲ್ಲ ಇಲಾಖೆಗಳು ಡಿಸೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳಿಸಿ ಕಾಮಗಾರಿಗಳ ಅನುಷ್ಠಾನವನ್ನು ಆರಂಭಿಸಬೇಕು. ಅನುಷ್ಠಾನ ಕಾರ್ಯಕ್ಕಾಗಿ ಮಾರ್ಚ್ ರವರೆಗೆ ಇರಲಿದೆ ಎಂದು ಸ್ಪಷ್ಟಪಡಿಸಿದರು.
ರಸಗೊಬ್ಬರ ಸರಿಯಾಗಿ ಹಂಚಿಕೆ ಮಾಡಿ
ಜಿಲ್ಲೆಯಲ್ಲಿ ಬಿತ್ತನೆ ಕಾರ್ಯಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ರಸಗೊಬ್ಬರ ಸಮಪರ್ಕವಾಗಿ ಹಂಚಿಕೆಯಾಗುವಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಅಗತ್ಯವಿರುವ ಕಡೆ ಹಂಚಿಕೆಯಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಹೇಳಿದರು.
ವಸತಿ ಯೋಜನೆ ಅಡಿ ಮನೆಗಳ ನಿರ್ಮಾಣ
ಗ್ರಾಮೀಣ ವಸತಿ ಯೋಜನೆ ಅನುಷ್ಠಾನವನ್ನು ಚುರುಕುಗೊಳಿಸಬೇಕು. ಜಿಲ್ಲೆಯಲ್ಲಿ 2020ರಿಂದ ಇದುವರೆಗೆ 20,286ಮನೆಗಳು ಮಂಜೂರಾಗಿದ್ದು, ಇವುಗಳ ಪೈಕಿ 11,324ಮನೆಗಳು ಪ್ರಗತಿಯಲ್ಲಿವೆ. 8,962 ಮನೆಗಳ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭಿಸಿಲ್ಲ. ಅಂಬೇಡ್ಕರ್ ನಿವಾಸ್ ಯೋಜನೆಯಡಿ 2011-12ನೇ ಸಾಲಿನಲ್ಲಿ 1,989 ಮನೆಗಳ ನಿರ್ಮಾಣ ಗುರಿ ನೀಡಲಾಗಿದ್ದು, 1,215 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಬಸವ ವಸತಿ ಯೋಜನೆಯಡಿ 6,451 ಮನೆಗಳ ಗುರಿ ನೀಡಲಾಗಿದ್ದು, 4,835 ಫಲಾನುಭವಿಗಳನ್ನು ಗುರುತಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ಇರುವ ತೊಡಕುಗಳನ್ನು ನಿವಾರಿಸಿ ಆದಷ್ಟು ಬೇಗನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಗಂಗಾ ಕಲ್ಯಾಣ ಅಡಿ 24 ವಿದ್ಯುತ್ ಸಂಪರ್ಕ
ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಕಳೆದ ತಿಂಗಳು 24 ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು ಇನ್ನೂ 60 ಸಂಪರ್ಕ ಕಲ್ಪಿಸಲು ಬಾಕಿಯಿದೆ. ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
https://suddikanaja.com/2022/03/28/shimoga-dc-dr-r-selvamani-meeting-instruction-to-clear-the-case-which-are-in-lokayukta-court/