ಅಭಿವೃದ್ಧಿ ಕಾಮಗಾರಿ ವೇಳೆ ಪತ್ತೆಯಾಯ್ತು 12ನೇ ಶತಮಾನದ ಕಸಪಯ್ಯ ನಾಯಕನ ಶಾಸನ, ಏನಿದರ ವಿಶೇಷ?

 

 

ಸುದ್ದಿ ಕಣಜ.ಕಾಂ
ಶಿಕಾರಿಪುರ: ತಾಲೂಕಿನ ಉಡುತಡಿ ಗ್ರಾಮದ ಅಕ್ಕಮಹಾದೇವಿ ಜನ್ಮ ಸ್ಥಳದ ಕೋಟೆಯ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡುವಾಗ ಬಿಜ್ಜಳ ಅರಸನ ದಂಡನಾಯಕ ಕಸಪಯ್ಯ ನಾಯಕನ ತೃಟಿತ ಶಾಸನ ಪತ್ತೆಯಾಗಿದೆ.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಆರ್.ಶೇಜೇಶ್ವರ್, ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಿ.ಪೂರ್ಣಿಮಾ, ರಮೇಶ ಹಿರೇಜಂಬೂರು, ಬಿಚ್ಚುಗತ್ತಿ ಶ್ರೀಪಾದ್, ಮಂಜುನಾಥ್ ಹೆಗಡೆ ಅವರು ಕ್ಷೇತ್ರ ಕಾರ್ಯ ಕೈಗೊಂಡಿದ್ದರು.

ಎಮ್ಮೆ ಕದ್ದಿದ್ದಕ್ಕೆ ಯುದ್ಧವೇ ನಡೆದಿತ್ತು, ಶಿಲ್ಪದಲ್ಲಿ ಪತ್ತೆಯಾಯ್ತು ಹೊಸ ವಿಚಾರ, ಏನದು?

ಕ್ರಿ.ಶ. 12ನೇ ಶತಮಾನದ ಉಡುತಡಿ ಕೋಟೆಯ ಪ್ರದೇಶದಲ್ಲಿ ಗಜಲಕ್ಷ್ಮಿ ಪಟ್ಟಿಕೆ, ಮಡಿಕೆಯ ಹಾಗೂ ಹೆಂಚುಗಳ ಚೂರುಗಳು ದೊರೆತಿದ್ದು, ಈ ಕೋಟೆಯ ಪೂರ್ವ ಭಾಗದ ಬಲ ಬುರುಜಿನ ಹತ್ತಿರ ಶಾಸನ ದೊರೆತಿದೆ.
ಶಾಸನವು 114 ಸೆಂ.ಮೀ. ಉದ್ದ ಹಾಗೂ 30 ಸೆಂ.ಮೀ ಅಗಲವಾಗಿದೆ. ಮೇಲ್ಭಾಗದಲ್ಲಿ ಸ್ವಲ್ಪ ಭಾಗ ತುಂಡಾಗಿದ್ದು, ಕೆಳ ಹಾಗೂ ಎಡ ಭಾಗದಲ್ಲಿ ಅಕ್ಷರಗಳು ತೃಟಿತವಾಗಿದೆ. ಈ ಶಾಸನವನ್ನು ಡಾ.ಜಗದೀಶ್ ಅವರಿಗೆ ಓದಿದ್ದಾರೆ.

IMG 2217ಶಾಸನದ ಮಹತ್ವ

  • ಶಾಸನದಲ್ಲಿ 17 ಸಾಲುಗಳು ಮಾತ್ರ ಕಂಡುಬರುತ್ತಿದ್ದು, ಇದರಲ್ಲಿ ಕಲಚೂರಿ ಬಿಜ್ಜಳ ಅರಸನ ಮಹಾದಂಡನಾಯಕ ಕಸಪಯ್ಯ ನಾಯಕನು ಬಲ್ಲೇಶ್ವರ ದೇವರ ಆರಾಧಕನಾಗಿದ್ದು, ಬ್ರಹ್ಮಪುರಿಗೆ ಅಂದರೆ ಬ್ರಾಹ್ಮಣರ ಅಗ್ರಹಾರಕ್ಕೆ 8 ಗದ್ಯಾಣ ನಾಣ್ಯಗಳನ್ನು ದಾನ ನೀಡಿರುವುದು ತಿಳಿದುಬರುತ್ತದೆ.
  • ಈ ಶಾಸನವು ಕ್ರಿ.ಶ. 1150-68ರ ಅವಧಿಯ ಕಲಚೂರಿ ಬಿಜ್ಜಳ ಅರಸನ ಕಾಲದ್ದಾಗಿದ್ದು, ಇದರಲ್ಲಿ ದಂಡನಾಯಕ ಕಸಪಯ್ಯ ನಾಯಕನ ಉಲ್ಲೇಖವಿದೆ. ಇವನು ಕ್ರಿ.ಶ. 1150-68ರ ಅವಧಿಯಲ್ಲಿ ಬಿಜ್ಜಳ ಅರಸನ ದಂಡನಾಯಕನಾಗಿ ಬನವಾಸಿ 12000 ನಾಡಿನ ಮಹಾದಂಡನಾಯಕನಾಗಿ ಬಳ್ಳಿಗಾವಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ಮಾಡಿರುವುದು ಅನೇಕ ಶಾಸನಗಳಲ್ಲಿ ಉಲ್ಲೇಖವಿದೆ.
  • ಹಿಂದೆ ಕಸಪಯ್ಯ ನಾಯಕನನ್ನು ಅಕ್ಕಮಹಾದೇವಿಯ ಪತಿ ಕೌಶಿಕ ಮಹಾರಾಜ ಇರಬಹುದೆಂದು ದೇವರ ಕೊಂಡರೆಡ್ಡಿ ಹಾಗೂ ಚಿದಾನಂದಮೂರ್ತಿ ಅವರು ಅಭಿಪ್ರಾಯಪಟ್ಟಿದ್ದರು. ಆದರೆ ಈಗ ಅಕ್ಕಮಹಾದೇವಿಯ ಜನ್ಮಸ್ಥಳವಾದ ಉಡುತಡಿಯ ಕೋಟೆಯಲ್ಲಿಯೇ ಕಸಪಯ್ಯ ನಾಯಕನ ಶಾಸನ ದೊರೆತಿರುವುದರಿಂದ ಇವರೇ ಕೌಶಿಕ ಮಹಾರಾಜ ಎಂಬುದಕ್ಕೆ ಹೆಚ್ಚಿನ ಸಾಕ್ಷ್ಯ ಈ ಶಾಸನದಿಂದ ದೊರೆತಿದೆ.
  • ಇದು ಅಕ್ಕಮಹಾದೇವಿ ಜನ್ಮ ಸ್ಥಳಕ್ಕೆ ಐತಿಹಾಸಿಕ ಮಹತ್ವದ್ದಾಗಿದೆ.

error: Content is protected !!