ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಶುಕ್ರವಾರದಿಂದ ಕೌನ್ಸೆಲಿಂಗ್ ಆರಂಭಗೊಂಡಿದೆ. ಮೊದಲ ದಿನದ ಸ್ನಾತಕೋತ್ತರ ಪದವಿ ಪ್ರವೇಶ ಕೌನ್ಸೆಲಿಂಗ್ನಲ್ಲಿ 30ಕ್ಕೂ ಹೆಚ್ಚು ವಿಭಾಗಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡರು.
ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಪ್ರಕಾರ ಶುಕ್ರವಾರ ಸಂಜೆ 4 ಗಂಟೆಯ ಹೊತ್ತಿಗೆ ಎಲ್ಲ ಸ್ನಾತಕೋತ್ತರ ವಿಭಾಗಗಳ ಶೇ. 65ರಷ್ಟು ಸೀಟುಗಳು ಭರ್ತಿಯಾಗಿದ್ದವು. ಕೋವಿಡ್19 ಕಾರಣದಿಂದಾಗಿ ಇನ್ನುಳಿದ ಆಕಾಂಕ್ಷಿಗಳು ಶನಿವಾರ ಮತ್ತು ಸೋಮವಾರ ವಿವಿಗೆ ಆಗಮಿಸಿ ಪ್ರವೇಶ ಪಡೆಯಲಿದ್ದಾರೆ.
ವಿವಿಯ ವಿಭಾಗಗಳನ್ನು ಕಲೆ ಮತ್ತು ಸಮಾಜವಿಜ್ಞಾನ ವಿಷಯಗಳು, ವಾಣಿಜ್ಯ ಮತ್ತು ನಿರ್ವಹಣಾ ವಿಷಯಗಳು, ಅನ್ವಯಿಕ ವಿಜ್ಞಾನಗಳು ಮತ್ತು ಮೂಲ ವಿಜ್ಞಾನಗಳೆಂದು ವಿಂಗಡಿಸಿ ಅನುಕ್ರಮವಾಗಿ ಸಮಾಜವಿಜ್ಞಾನ, ವಾಣಿಜ್ಯಶಾಸ್ತ್ರ, ಗಣಿತ ವಿಜ್ಞಾನ ಮತ್ತು ಜೀವ ವಿಜ್ಞಾನ ವಿಷಯಗಳ ಸಮುಚ್ಚಯಗಳಲ್ಲಿ ಪ್ರವೇಶಾತಿ ಹಮ್ಮಿಕೊಳ್ಳಲಾಗಿತ್ತು. ಮುಂದಿನ ಎರಡು ದಿನವೂ ಇದೇ ಕಟ್ಟಡಗಳಲ್ಲಿ ಕೌನ್ಸೆಲಿಂಗ್ ನಡೆಯಲಿದೆ. ಸೀಟುಗಳ ವಿವರ, ವಿದ್ಯಾರ್ಥಿ ಮತ್ತು ಕಾಲೇಜು ಆಯ್ಕೆ ಕುರಿತ ಮಾಹಿತಿಗಳನ್ನು ಯಾವುದೇ ಗೊಂದಲಗಳಿಗೆ ದಾರಿಯಾಗದಂತೆ ಡಿಜಿಟಲ್ಬೋರ್ಡ್ಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು. ಮೈಕ್ ಮೂಲಕ ಆಯ್ಕೆಗೊಂಡವರ ಹೆಸರುಗಳನ್ನು ಘೋಷಿಸಲಾಗುತ್ತಿತ್ತು.
ಎಲ್ಲೆಲ್ಲಿ ಕೌನ್ಸೆಲಿಂಗ್: ವಿಶ್ವವಿದ್ಯಾಲಯದ ಮುಖ್ಯ ಆವರಣ, ಕಡೂರು ಪಿ.ಜಿ.ಕೇಂದ್ರ, ಚಿಕ್ಕಮಗಳೂರು ಪಿಜಿ ಕೇಂದ್ರ ಮತ್ತು 20ಕ್ಕೂ ಹೆಚ್ಚು ಸ್ನಾತಕೋತ್ತರ ಕಾಲೇಜುಗಳ ಎಲ್ಲ ವಿಭಾಗಗಳಿಗೆ ಡಿಸೆಂಬರ್ 18, 19 ಮತ್ತು 21 ರಂದು ಪ್ರವೇಶಾತಿ ಕೌನ್ಸೆಲಿಂಗ್ ಏರ್ಪಡಿಸಲಾಗಿದೆ.
ಮಾರ್ಗಸೂಚಿ ಅನ್ವಯ ಕೌನ್ಸೆಲಿಂಗ್: ಕೋವಿಡ್ ಮಾರ್ಗಸೂಚಿಯಂತೆ ವಿಶ್ವವಿದ್ಯಾಲಯವು ಪ್ರವೇಶ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿತ್ತು. ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. ದೇಹದ ಉಷ್ಣಾಂಶ ಪರೀಕ್ಷಿಸಿ ವಿವಿ ಕ್ಯಾಂಪಸ್ ಒಳಬಿಡುವ ಜೊತೆಗೆ ವಿಭಾಗಗಳಲ್ಲಿ ಕೂರಲು 6 ಅಡಿ ಅಂತರ ನೀಡಿ ಕುರ್ಚಿಗಳನ್ನು ಹಾಕಲಾಗಿತ್ತು.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚು ಸೀಟು ಆಕಾಂಕ್ಷಿಗಳು ಮತ್ತು ಅವರ ಪೋಷಕರು ಉತ್ಸುಕತೆಯಿಂದ ಪ್ರವೇಶ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.