Shivamogga airport | ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ದಿನಾಂಕ ನಿಗದಿ ಬೆನ್ನಲ್ಲೇ ಉಗ್ರ ಸ್ವರೂಪದ ಹೋರಾಟದ ಎಚ್ಚರಿಕೆ, ಕಾರಣವೇನು?

Shivamogga Airport

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿಮಾನ ನಿಲ್ದಾಣಕ್ಕೆ ನಿವೇಶನ ನೀಡಿದ ಭೂಮಿ ಸಂತ್ರಸ್ತರಿಗೆ ಫೆಬ್ರವರಿ 5ರೊಳಗೆ ನಿವೇಶನ ಹಂಚಿಕೆ ಮಾಡದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಎಚ್ಚರಿಕೆ ನೀಡಿದರು.

READ | ಯಡಿಯೂರಪ್ಪ ಜನ್ಮದಿನವೇ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ, ಬರಲಿದ್ದಾರೆ ಪ್ರಧಾನಿ ಮೋದಿ

ಮಥುರಾ ಪ್ಯಾರಡೈಸ್’ನಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ನಿವೇಶನ ನೀಡುವಲ್ಲಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. 2007ರಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ವಿಮಾನ ನಿಲ್ದಾಣಕ್ಕಾಗಿ ಸೋಗಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ರೈತರ ಮನವೊಲಿಸಿ ಸಂತ್ರಸ್ತರಿಗೆ ನಿವೇಶನ, ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, 15 ವರ್ಷಗಳೇ ಕಳೆದರೂ ಇದುವರೆಗೆ ಸಂತ್ರಸ್ತರಿಗೆ ನಿವೇಶನ ನೀಡಿಲ್ಲ. ಸಂತ್ರಸ್ತರ ಸಮಸ್ಯೆ ಬಗೆಹರಿಸದೇ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಾಗುತ್ತಿದೆ. ತಾವೆಂದೂ ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ, ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದನೆ ನೀಡಬೇಕು. ಇಲ್ಲದಿದ್ದರೆ ಹೋರಾಟದ ದಾರಿ ಅನಿವಾರ್ಯವಾಗಲಿದೆ ಎಂದು ಹೇಳಿದರು.

Veda vijayakumar airport
ಹೋರಾಟಕ್ಕೆ ಪಕ್ಷಾತೀತ ಬೆಂಬಲ
ಫೆ.5ರೊಳಗೆ ಬೇಡಿಕೆ ಈಡೇರಿಸದಿದ್ದರೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ ಪ್ರಮುಖರಾದ ಮಧು ಬಂಗಾರಪ್ಪ, ಕಿಮ್ಮನೆ ರತ್ನಾಕರ್, ರೈತ ಮುಖಂಡರಾದ ಬಸವರಾಜಪ್ಪ, ಕೆ.ಟಿ.ಗಂಗಾಧರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಆಶ್ವಾಸನೆ ಬಿಟ್ಟರೆ ಮತ್ತೇನೋ ಆಗಿಲ್ಲ
ಹಾಪ್ ಕಾಮ್ಸ್ ನಿರ್ದೇಶಕ ಆರ್.ವಿಜಯಕುಮಾರ್ ಮಾತನಾಡಿ, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಅವರು ಹಲವು ಸಲ ಸಂತ್ರಸ್ತರನ್ನು ಕರೆದು ಸಭೆ ನಡೆಸಿದ್ದಾರೆ. ಬೇಡಿಕೆಗಳನ್ನು ಈಡೇರಿಸುವ ಆಶ್ವಾಸನೆಯನ್ನೂ ನೀಡಿದ್ದಾರೆ. ಆದರೆ, ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಸೋಗಾನೆಯ ವಿನಾಯಕನಗರದಲ್ಲಿ 51 ಜನ ಬಗರ್ ಹುಕುಂ ಸಾಗುವಳಿದಾರರಿಗೆ ಶಾಸಕರು ಮತ್ತು ತಹಶೀಲ್ದಾರರು ಕಳೆದ ಸೆಪ್ಟೆಂಬರ್’ನಲ್ಲಿ ಸಾಗುವಳಿ ಚೀಟಿಯನ್ನು ವಿತರಣೆ ಮಾಡಿದ್ದರು. ಆದರೆ, ಆ ಸಾಗುವಳಿ ಚೀಟಿಗಳನ್ನು ವಜಾ ಮಾಡಲಾಗಿದೆ ಎಂದು ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಅರುಣ್ ನಾಯ್ಡು, ರಮೇಶ್, ಗಣೇಶ್ ಕುಮಾರ್, ಅನಿಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

https://suddikanaja.com/2023/01/19/jcb-operator-training-application-invited-for-eligible-candidates/

error: Content is protected !!