Marikamba Jatre | ಸಾಗರ ಮಾರಿಕಾಂಬಾ ಜಾತ್ರೆಯಲ್ಲಿ ವಿಶೇಷ ಖಾದ್ಯ, ಏನೆಲ್ಲ‌ ವ್ಯವಸ್ಥೆ?

shivamogga1

 

 

ಸುದ್ದಿ ಕಣಜ.ಕಾಂ ಸಾಗರ
SAGAR: ಅತ್ಯಂತ ವೈಭವಯುತವಾಗಿ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆ ನಡೆಯುತ್ತಿದ್ದು, ಪ್ರತಿ ದಿನವು ಸಾವಿರಾರು ಜನರು ಆಗಮಿಸಿ ಶ್ರೀ ಮಾರಿಕಾಂಬಾ ದೇವರ ದರ್ಶನ ಪಡೆಯುತ್ತಿದ್ದಾರೆ.
ಶುಕ್ರವಾರ, ಶನಿವಾರ ಸಹ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಪ್ರತಿ ದಿನ ದೇವರ ದರ್ಶನ ಪಡೆಯಲು ಆಗಮಿಸುವ ಸಾರ್ವಜನಿಕರಿಗೆ ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯಿಂದ ನಿರಂತರ ಅನ್ನ ಸಂತರ್ಪಣೆ ನಡೆಯುತ್ತಿದೆ. ಜಾತ್ರಾ ಸಮಿತಿ ನಡೆಯುತ್ತಿರುವ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡ ಜನರು ಅಚ್ಚುಕಟ್ಟಾದ ವ್ಯವಸ್ಥೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಸಾಗರ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಶ್ರೀ ಮಾರಿಕಾಂಬ ಜಾತ್ರೆ ಪ್ರಯುಕ್ತ ಆರಂಭದ ಮೊದಲ ದಿನದಿಂದಲೂ ಜನರಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ. ದಿನ ನಿತ್ಯ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಸೇರಿದಂತೆ ಒಟ್ಟಾರೆ 8 ರಿಂದ 10 ಸಾವಿರಕ್ಕೂ ಅಧಿಕ ಜನರು ಅನ್ನ ಸಂತರ್ಪಣೆಯಲ್ಲಿ ತಿಂಡಿ, ಊಟ ಮಾಡುತ್ತಿದ್ದಾರೆ.

READ | ಸರ್ಕಾರಿ ಕಚೇರಿಗಳು ವಾರದಲ್ಲಿ ಎರಡು ದಿನ ರಜೆ, ಹೆಚ್ಚುವರಿ ಒಂದು ಗಂಟೆ ಡ್ಯೂಟಿ

ಅನ್ನ ಸಂತರ್ಪಣೆಕ್ಕೆ ತಂಡ
ಶ್ರೀ ಮಾರಿಕಾಂಬ ಜಾತ್ರಾ ಸಮಿತಿಯಿಂದ ದಾಸೋಹ ಸಮಿತಿ ರಚಿಸಿದ್ದು, ಸಂಚಾಲಕ ವಿನಾಯಕ್ ಗುಡಿಗಾರ್, ಸಹ ಸಂಚಾಲಕ ನಿತ್ಯಾನಂದ ಶೆಟ್ಟಿ, ಭಾಸ್ಕರ್ ಆಚಾರ್ ಸೇರಿದಂತೆ 15-20 ಜನರ ತಂಡ ಅನ್ನ ಸಂತರ್ಪಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಅಡುಗೆ ಭಟ್ಟರು ಹಾಗೂ ಸೇವಾ ಕಾರ್ಯಕರ್ತರು ಶ್ರೀ ಮಾರಿಕಾಂಬಾ ಜಾತ್ರೆಯ ದಾಸೋಹ ಕಾರ್ಯದಲ್ಲಿ ಸೇವೆ ಮಾಡುತ್ತಿದ್ದಾರೆ.
ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ನಡೆಯುತ್ತಿರುವ ದಾಸೋಹ ಕಾರ್ಯವು ಪ್ರತಿ ದಿನವು ವೈವಿಧ್ಯ ತಿಂಡಿ, ಸಿಹಿ ತಿನಿಸುಗಳನ್ನು ವಿತರಿಸಲಾಗುತ್ತಿದೆ. ಬೆಳಗ್ಗೆ ತಿಂಡಿಯಲ್ಲಿ ಕೇಸರಿಬಾತ್, ಉಪ್ಪಿಟ್ಟು, ಪಲಾವ್, ಚಿತ್ರಾನ್ನ, ಪುಳಿಯೋಗರೆ, ಅವಲಕ್ಕಿ ಪುಳಿಯೋಗರೆ, ಟೀ, ಕಾಫಿ ವಿತರಿಸಲಾಗುತ್ತಿದೆ.
ಮಧ್ಯಾಹ್ನ ಹಾಗೂ ರಾತ್ರಿ ನಡೆಯುವ ಊಟದ ವ್ಯವಸ್ಥೆಯಲ್ಲಿ ಪ್ರತಿ ದಿನ ಅಡುಗೆಯಲ್ಲಿ ಸಿಹಿ ತಿನಿಸು, ಪಲ್ಯ, ಅನ್ನ ಸಾಂಬರ್, ಮಜ್ಜಿಗೆ, ಉಪ್ಪಿನಕಾಯಿ ನೀಡಲಾಗುತ್ತಿದೆ. ಊಟದ ಸಿಹಿತಿನಿಸುವಿನಲ್ಲಿ ಕೇಸರಿಬಾತ್, ಪಾಯಸ, ಗೋದಿ ಪಾಯಸ, ಮೈಸೂರು ಪಾಕ್ ಹೋಳಿಗೆ ಸೇರಿದಂತೆ ದಿನಕ್ಕೊಂದು ಸಿಹಿ ನೀಡಲಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಜಾತ್ರೆಯಲ್ಲಿ ದಿನಪೂರ್ತಿ ನಿಂತು ಕೆಲಸ ಮಾಡುವ ಪೊಲೀಸ್, ಹೋಂಗಾರ್ಡ್ ಸಿಬ್ಬಂದಿಗೆ ಕುಳಿತು ಊಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಸ್ನೇಹಿತರು ಸಾಗರದಿಂದ ಅನ್ನದಾನ
ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆಯ ಪ್ರಯುಕ್ತ ಸಾಗರ ಹೊಟೇಲ್ ವೃತ್ತದ ನಗರಸಭೆ ಸಂಕೀರ್ಣದಲ್ಲಿ ‘ಸ್ನೇಹಿತರು ಸಾಗರ’ ಸಂಸ್ಥೆ ವತಿಯಿಂದಲೂ ಪ್ರತಿ ದಿನ ಮಧ್ಯಾಹ್ನ ಊಟ ಉಚಿತವಾಗಿ ವಿತರಿಸಲಾಗುತ್ತಿದೆ. ಜಾತ್ರೆಯ 9 ದಿನಗಳ ಕಾಲವು ಮಧ್ಯಾಹ್ನ ಊಟ ನೀಡಲಾಗುತ್ತಿದೆ. 12-13 ಜಾತ್ರೆಗಳಿಂದಲೂ ಸ್ನೇಹಿತರು ಸಾಗರ ಸಂಸ್ಥೆಯು ಸಾರ್ವಜನಿಕರಿಗೆ ಊಟ ವಿತರಿಸುವ ಕಾರ್ಯ ನಡೆಸುತ್ತಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯು ಕಲ್ಪಿಸಿದೆ. ಜಾತ್ರೆಗೆ ಆಗಮಿಸುವ ಸಾವಿರಾರು ಜನರು ನಿತ್ಯ ದಾಸೋಹದಲ್ಲಿ ಭಾಗಿಯಾಗುತ್ತಿದ್ದಾರೆ.
ಫೆ.12ರಂದು ಕಲಾಸಿರಿ ಕಾರ್ಯಕ್ರಮ
ಸಾಗರದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ನಿರ್ಮಿಸಿರುವ ನಗರಸಭೆ ಆವರಣದ ಮಾರಿಕಾಂಬಾ ಕಲಾವೇದಿಕೆಯಲ್ಲಿ ಫೆ.12ರ ಸಂಜೆ ಕಲಾಸಿರಿ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 5.30ರಿಂದ 6ರವರೆಗೆ ಕಲ್ಲುಕೊಪ್ಪ ಹೆಗ್ಗೋಡು ಹಾಲ್ದೀಪ ಚಂಡೆ ಬಳಗದಿಂದ ಚಂಡೆ ವಾದನ, ಸಂಜೆ 6ರಿಂದ 6.15 ರವರೆಗೆ ಸ್ನೇಹ ಸಾಗರ ಬಳಗದಿಂದ ಲಂಬಾಣಿ ನೃತ್ಯ, 6.15ರಿಂದ 7 ರವರೆಗೆ ತೀರ್ಥಹಳ್ಳಿ ವಿಭಾ ಪ್ರಕಾಶ ಅವರಿಂದ ಸುಗಮ ಸಂಗೀತ, ರಾತ್ರಿ 7 ರಿಂದ 7.45 ರವರೆಗೆ ಮೈಸೂರು ಡಾ. ಕುಮಾರ್ ಅವರಿಂದ ಭರತನಾಟ್ಯ, 7.45 ರಿಂದ 9 ರವರೆಗೆ ಬೆಂಗಳೂರು ಶಶಿಧರ್ ಕೋಟೆ ಅವರಿಂದ ಸಂಗೀತ ಸಂಭ್ರಮ, ನಂತರ ಡಾ. ಪದ್ಮಿನಿ, ಶ್ರೀನಿವಾಸ, ರಜನಿ, ಉದಯ ಅಂಕೋಲ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

Bike Rally | ಬೈಕ್‍ನಲ್ಲೇ ದೇಶ ಪರ್ಯಟನೆಗೆ ಹೊರಟ ಮಲೆನಾಡು ಹುಡುಗ, ಬೈಕಿನ ವಿಶೇಷಗಳೇನು?

error: Content is protected !!