ಕೊಳೆಗೇರಿ ನಿವಾಸಿಗಳಿಗೆ ಸಿಹಿ ಸುದ್ದಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊಳೆಗೇರಿ ನಿವಾಸಿಗಳಿಗೆ ರಾಜ್ಯ ಸರ್ಕಾರ ಹೊಸ ವರ್ಷದಲ್ಲಿ ಸಿಹಿ ಸುದ್ದಿಯನ್ನು ನೀಡಿದೆ.
ಸರ್ಕಾರಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮಾಲಿಕತ್ವದಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳಲ್ಲಿ ವಾಸವಿರುವ ನಿವಾಸಿಗಳಿಗೆ ಸ್ವತ್ತಿನ ಹಕ್ಕುಪತ್ರ ನೀಡಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯ 18,700 ಕುಟುಂಬಗಳಿಗೆ ಇದರ ಪ್ರಯೋಜನವಾಗಲಿದೆ.
ಶನಿವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಈ ಬಗ್ಗೆ ಮಾಹಿತಿ ನೀಡಿದರು.

10457774 735106739868660 4439936405963279747 nಕೊಳಚೆ ಪ್ರದೇಶ ನಿವಾಸಿಗಳ ಹಲವು ವರ್ಷಗಳ ಬೇಡಿಕೆ ಈಗ ಕೈಗೂಡುತ್ತಿದ್ದು, ಹಕ್ಕುಪತ್ರ ಲಭಿಸಿದ ಬಳಿಕ ಬ್ಯಾಂಕ್ ಗಳಿಂದ ಹಣಕಾಸು ನೆರವು ಪಡೆದು ಸ್ವಂತ ಮನೆಯನ್ನು ನಿರ್ಮಿಸಲು ಸಾಧ್ಯವಾಗಲಿದೆ. ಎರಡನೇ ಹಂತದಲ್ಲಿ ಖಾಸಗಿ ಜಮೀನಿನಲ್ಲಿ ನಿರ್ಮಾಣಗೊಂಡಿರುವ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು.
– ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವರಿ ಸಚಿವರು

ಶಿವಮೊಗ್ಗ ನಗರದಲ್ಲಿ ಘೋಷಿತ ಸರ್ಕಾರಿ ಮಾಲಿಕತ್ವದ 25 ಹಾಗೂ ಸ್ಥಳೀಯ ಸಂಸ್ಥೆ ಮಾಲಿಕತ್ವದಲ್ಲಿರುವ 10 ಕೊಳಚೆ ಪ್ರದೇಶಗಳು ಸೇರಿ ಒಟ್ಟು 35 ಕೊಳಚೆ ಪ್ರದೇಶಗಳಿಗೆ ಸ್ವತ್ತಿನ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಶುರುವಾಗಲಿದೆ ಸಮೀಕ್ಷೆ ಕಾರ್ಯ: ಮೊದಲ ಹಂತದಲ್ಲಿ ಜನವರಿ 3ರಿಂದ ಕೊಳಚೆ ಪ್ರದೇಶದಲ್ಲಿರುವ ಮನೆಗಳಿಗೆ ಮನೆ ಸಂಖ್ಯೆಯನ್ನು ನಮೂದಿಸುವ ಕಾರ್ಯ ಪ್ರಾರಂಭವಾಗಲಿದೆ. ಎರಡನೇ ಹಂತದಲ್ಲಿ ಮನೆಗಳ ಸಮೀಕ್ಷೆ ಕಾರ್ಯ ಜನವರಿ 6ರಿಂದ ಆರಂಭವಾಗಲಿದೆ. ಹಕ್ಕುಪತ್ರ ನೀಡುವ ಪ್ರಕ್ರಿಯೆಯನ್ನು ಮೂರ್ನಾಲ್ಕು ತಿಂಗಳ ಒಳಗಾಗಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಈ ದಾಖಲಾತಿಗಳನ್ನು ನೀಡಿ: ಸಮೀಕ್ಷೆ ಕಾರ್ಯಕ್ಕೆ ಸಿಬ್ಬಂದಿ ಪ್ರತಿ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಅವರಿಗೆ ನಿಖರವಾದ ಮಾಹಿತಿ ಹಾಗೂ ದಾಖಲಾತಿಗಳನ್ನು ನೀಡಿ ಸಹಕರಿಸಬೇಕು ಎಂದು ಈಶ್ವರಪ್ಪ ಮನವಿ ಮಾಡಿದರು.
ಆಧಾರ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು ಮತ್ತು ಜಾತಿ ಪ್ರಮಾಣ ಪತ್ರವನ್ನು ಸರ್ವೆ ಸಂದರ್ಭದಲ್ಲಿ ಒದಗಿಸಬೇಕು. 10 ಸಾವಿರ ರೂಪಾಯಿ ನೋಂದಣಿ ಶುಲ್ಕವನ್ನು ಭರಿಸಬೇಕು. ಸ್ಥಳೀಯ ಕಾರ್ಪೊರೇಟರ್ ಗಳು ಸರ್ವೆ ಕಾರ್ಯಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿರುವ ಕೊಳಚೆ ಪ್ರದೇಶಗಳ ಸಂಖ್ಯೆ
ಜಿಲ್ಲೆಯಲ್ಲಿ ಒಟ್ಟು 163 ಘೋಷಿತ ಕೊಳಚೆ ಪ್ರದೇಶಗಳಿವೆ. ಇದರಲ್ಲಿ ಸರ್ಕಾರಿ 65, ಖಾಸಗಿ 41, ಮಂಡಳಿ 2, ವಿ.ಐ.ಎಸ್.ಎಲ್ 5 ಮತ್ತು ಎಂ.ಪಿ.ಎಂನ 4 ಕೊಳಚೆ ಪ್ರದೇಶಗಳು ಸೇರಿವೆ. ಶಿವಮೊಗ್ಗ ನಗರದಲ್ಲಿ 25 ಸರ್ಕಾರಿ, 10 ಮಹಾನಗರ ಪಾಲಿಕೆ ಮಾಲಿಕತ್ವದ ಕೊಳಚೆ ಪ್ರದೇಶಗಳಿದ್ದು, 5700 ಮನೆಗಳಿವೆ.

error: Content is protected !!