ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಲಸಿಕೆ ಜನವರಿ ಮೂರನೇ ವಾರದಲ್ಲಿ ಬರುವ ಸಾಧ್ಯತೆ ಇದೆ. ಅದಕ್ಕೂ ಮುಂಚೆ ಶಿವಮೊಗ್ಗದಲ್ಲಿ ಶನಿವಾರ ಪೂರ್ವ ಭಾವಿಯಾಗಿ ಡ್ರೈ ರನ್ ಮಾಡಲಾಯಿತು.
ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಗಳಾದ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಮತ್ತು ಶುಶ್ರೂಷಕಿಯರಿಗೆ ಈ ಡ್ರೈ ರನ್ಗೆ ಒಳಪಡಿಸಲಾಯಿತು. ಪ್ರತಿ ಕೇಂದ್ರದಲ್ಲಿ 25 ಸೇರಿ ಒಟ್ಟು 75 ಜನ ಈ ಚಟುವಟಿಕೆಯಲ್ಲಿ ಪಾಲ್ಗೊಂಡರು.
ಏನಿದು ಡ್ರೈ ರನ್: ಲಸಿಕೆ ಬಂದ ತಕ್ಷಣ ಆದ್ಯತೆಯ ಮೇರೆಗೆ ಅದನ್ನು ನೀಡಲು ನಿರ್ಧರಿಸಲಾಗಿದೆ. ಆದರೆ, ಯಾರಿಗೆ ಕೊಡಬೇಕು, ಹೇಗೆ ಕೊಡಬೇಕು ಎಂಬುವುದರ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದುವ ಉದ್ದೇಶದಿಂದ ಡ್ರೈ ರನ್ ಮಾಡಲಾಗುತ್ತದೆ. ಇದೊಂದು ರೀತಿಯ ಪೂರ್ವಾಭ್ಯಾಸವಾಗಿರುತ್ತದೆ. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಬೆಳಗ್ಗೆ ನಡೆದ ಡ್ರೈ ರನ್ನಲ್ಲಿ 25 ಜನ ಪಾಲ್ಗೊಂಡಿದ್ದರು. ಈ ವೇಳೆ ಲಸಿಕೆ ಎಲ್ಲಿ, ಹೇಗೆ ಪಡೆಯಬೇಕು. ಪಡೆದ ನಂತರ ಅನುಸರಿಸಬೇಕಾದ ನಿಯಮಗಳೇನು ಇತ್ಯಾದಿ ವಿಚಾರಗಳನ್ನು ಅಣಕು ರೂಪದಲ್ಲಿ ಮಾಡಲಾಯಿತು.
ಎಲ್ಲೆಲ್ಲಿ ಡ್ರೈ ರನ್?: ಶಿವಮೊಗ್ಗದ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ, ಶಿಕಾರಿಪುರ ತಾಲ್ಲೂಕು ಆಸ್ಪತ್ರೆ ಹಾಗೂ ಭದ್ರಾವತಿ ತಾಲ್ಲೂಕಿನ ಅಂತರಗಂಗೆಯ ಪ್ರಾಥಮಿಕ ಆರೋಗ್ಯ ಕೇಂದ್ರ.
ಕೊಳೆಗೇರಿ ನಿವಾಸಿಗಳಿಗೆ ಸಿಹಿ ಸುದ್ದಿ
ಹೇಗಿರಲಿದೆ ಕೇಂದ್ರದ ವಿನ್ಯಾಸ: ಮೂರು ಕೊಠಡಿಗಳು ಇರಲಿವೆ. ಈಗಾಗಲೇ ಮೆಗ್ಗಾನ್ನಲ್ಲಿ ಇದಕ್ಕಾಗಿ ಮೂರು ಕೋಣೆ ಮೀಸಲು ಇರಿಸಲಾಗಿದೆ. ಮೊದಲನೇ ಕೊಠಡಿಯಲ್ಲಿ ಲಸಿಕೆಗಾಗಿ ಬಂದ ಫಲಾನುಭವಿಗಳ ಮಾಹಿತಿಯನ್ನು ಆನ್ಲೈನ್ನಲ್ಲಿ ದಾಖಲಿಸಲಾಗುತ್ತದೆ. ನಂತರದ ಕೋಣೆಯಲ್ಲಿ ಲಸಿಕೆ ನೀಡಲಾಗುತ್ತದೆ. ಮೂರನೇಯದ್ದರಲ್ಲಿ ಲಸಿಕೆ ಪಡೆದ ಬಳಿಕ ವಿಶ್ರಮಿಸಲು ಕೋಣೆಯ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಡ್ರೈ ರನ್ ವೇಳೆ ಭೇಟಿ ನೀಡಿ ವೀಕ್ಷಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಡಿಎಚ್ಒ ಡಾ.ರಾಜೇಶ್ ಸುರಗೀಹಳ್ಳಿ, ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.