ಶ್ರೀಗಂಧ ಕೋಠಿಯಲ್ಲಿ ತಳ್ಳಾಟ, ನೂಕಾಟ, ವಾಗ್ವಾದ, ಕಾರಣವೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟದಿಂದ ನಗರದ ಶ್ರೀಗಂಧ ಕೋಠಿಗೆ ಗುರುವಾರ ಮುತ್ತಿಗೆ ಯತ್ನ ಮಾಡಲಾಯಿತು. ಆದರೆ, ಖಾಕಿ ಬಿಗಿ ಬಂದೋಬಸ್ತ್ ಕಾರಣದಿಂದಾಗಿ ಪ್ರತಿಭಟನಾಕಾರರು ಸಿಸಿಎಫ್ ಕಚೇರಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.
ಮಲೆನಾಡಿಗೆ ಅಕೇಶಿಯಾ ಬೇಡ ಹಾಗೂ ಎಂಪಿಎಂ ಕಾರ್ಖಾನೆಗೆ ನಲವತ್ತು ವರ್ಷಗಳ ಹಿಂದೆ ಗುತ್ತಿಗೆ ನೀಡಿದ್ದ ಅರಣ್ಯ ಭೂಮಿಯನ್ನು ಮರು ಪರಭಾರೆ ಮಾಡಿರುವುದನ್ನು ಖಂಡಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುತ್ತಿಗೆಗೆ ನಿರ್ಧರಿಸಲಾಗಿತ್ತು. ಅದರನ್ವಯ ಯತ್ನಿಸಿದಾಗ ಪೊಲೀಸರು ತಡೆದರು. ಹೋರಾಟಗಾರರು ಹಾಗೂ ಪೆÇಲೀಸರ ನಡುವೆ ತಳ್ಳಾಟ, ನೂಕಾಟ ಮತ್ತು ವಾಗ್ವಾದ ನಡೆಯಿತು.

ಎಂಪಿಎಂಗೆ ನೀಡಿದ್ದ ಭೂಮಿಯ ಲೀಸ್ ಅವಧಿ ಪೂರ್ಣಗೊಂಡಿದೆ. ಆದರೆ, ಸರ್ಕಾರ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿ ಹಸ್ತಾಂತರ ಮಾಡದೇ ಮತ್ತೆ ಲೀಸ್ ನವೀಕರಣದ ಮೂಲಕ ಈ ಭೂಮಿಯನ್ನು ಮುಚ್ಚಿ ಹೋಗಿರುವ ಕಂಪನಿಗೆ ಪರಭಾರೆ ಮಾಡಿದೆ. ಹೋರಾಟ ಈಗ ಆರಂಭವಾಗಿದೆ. ಅರಣ್ಯ ಭೂಮಿಯನ್ನು ಯಾವುದೇ ಕಾರಣಕ್ಕೂ ಎಂಪಿಎಂಗೆ ಕೊಡಬಾರದು. ಕೊಟ್ಟರೆ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು.
– ಕೆ.ಟಿ ಗಂಗಾಧರ್, ರಾಜ್ಯ ರೈತ ಮುಖಂಡ

ಮಲೆನಾಡಿಗೆ ಕಂಟಕವಾದ ಅಕೇಶಿಯಾ ನೆಡುವುದನ್ನು ವಿರೋಧೀಸಿ ರಾಜ್ಯದ ನಾನಾ ಕಡೆಗಳಿಂದ ಪರಿಸರ ಹೋರಾಟಗಾರರು, ಪ್ರಗತಿಪರ ಚಿಂತಕರು, ವಿವಿಧ ಸಂಘಟನೆಗಳ ಮುಖಂಡರು ಶಿವಮೊಗ್ಗಕ್ಕೆ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮೆರವಣಿಗೆ: ನಗರದ ಬೆಕ್ಕಿನಕಲ್ಮಠ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣಕ್ಕೆ ತಲುಪಿತು. ಮುತ್ತಿಗೆಗೆ ಯತ್ನಿಸಿದಾಗ ಪೊಲೀಸರು ತಡೆದರು. ಇದನ್ನು ವಿರೋಧಿಸಿದ ಹೋರಾಟಗಾರರು ಪೊಲೀಸ್ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದರು.

80 ಸಾವಿರ ಎಕರೆ ಅರಣ್ಯ ಭೂಮಿಯ ಮೇಲೆ ಕಣ್ಣಿಟ್ಟು ಎಪಿಎಂ ಕಾರ್ಖಾನೆ ಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಅರಣ್ಯ ಭೂಮಿಯನ್ನು ಉಳಿಸಲು ನಾವೇ ಪ್ರಯತ್ನಿಸುತ್ತೇವೆ. ಅಕೇಶಿಯಾ ನೆಡದಂತೆ ಈಗಾಗಲೇ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. 1982ರ ಕಾಯ್ದೆಯ ಪ್ರಕಾರ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಲ್ಲದ ಇರುವ ಯಾವುದೇ ಚಟುವಟಿಕೆ ನಡೆಸಿದರೆ ಅದು ಕ್ರಿಮಿನಲ್ ಅಪರಾಧ.
– ಶಶಿ ಸಂಪಳ್ಳಿ, ಪತ್ರಕರ್ತರು, ಪರಿಸರ ಹೋರಾಟಗಾರ

ಮಲೆನಾಡಿನ ನಿತ್ಯಹರಿದ್ವರ್ಣ ಕಾಡಿನಲ್ಲಿ ಸಾಮಾಜಿಕ ಅರಣ್ಯದ ಹೆಸರಿನಲ್ಲಿ ಅರಣ್ಯ ಇಲಾಖೆ ಅಕೇಶಿಯ ಬೆಳಸುತ್ತಿದೆ. ಇದು ಮಲೆನಾಡು ದ್ರೋಹಿ ಕಾರ್ಯ ಎಂದು ಪರಿಸರ ಹೋರಾಟಗಾರ ಕಲ್ಕುಳಿ ವಿಠ್ಠಲ್ ಹೆಗಡೆ ಆರೋಪಿಸಿದರು.
ಡಿಎಸ್‍ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಪ್ರೊ. ಕುಮಾರ್ ಸ್ವಾಮಿ, ಬಿ. ರಮೇಶ್ ಹೆಗಡೆ, ಜಿ.ಡಿ ಮಂಜನಾಥ್, ಡಿ.ಮಂಜುನಾಥ್, ಶೇಖರ್ ಗೌಳೇರ್, ಅಖಿಲೇಶ್ ಚಿಪ್ಪಳಿ, ರಾಜೇಂದ್ರ ಕಂಬಳಗೆರೆ, ಯಾದವ್ ರೆಡ್ಡಿ, ಕೃಷ್ಣಮೂರ್ತಿ ಹಿಳ್ಳೋಡಿ, ಪ್ರೊ.ಎಲ್.ಕೆ. ಶ್ರೀಪತಿ, ವಿರೇಶ್ ಡಿ.ಬಿ.ಹಳ್ಳಿ, ಪ್ರಸನ್ನ ಹಿತ್ಲಗದ್ದೆ, ರವಿಹರಿಗೆ, ಅಕ್ಷತಾ ಹುಂಚದಕಟ್ಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಎಂಪಿಎಂ ಕಾರ್ಖಾನೆ ಹೆಸರಿನಲ್ಲಿ ಮತ್ತೆ ರಿನಿವಲ್ ಮಾಡಿ ಅದನ್ನು ಬೇನಾಮಿಯಾಗಿ ಖಾಸಗಿಯವರಿಗೆ ಕಾರ್ಖಾನೆ ಕೊಡುತ್ತೇವೆ ಎಂಬ ನೆಪದಲ್ಲಿ ಸಂಪೂರ್ಣ ಅರಣ್ಯ ಭೂಮಿಯನ್ನು ತಮ್ಮ ರಿಯಲ್ ಎಸ್ಟೇಟ್‍ಗೆ ಬೇನಾಮಿಯಾಗಿ ಕಬಳಿಸಲು ಕೆಲವು ರಾಜಕಾರಣಿಗಳು ಹೊರಟಿದ್ದಾರೆ.ಅದರ ವಿರುದ್ದ ಸಿಸಿಎಫ್ ಕಚೇರಿಗೆ ಮುತ್ತಿಗೆ ಹಾಕಲಾಗಿದೆ.
– ಕೆ.ಪಿ ಶ್ರೀಪಾಲ್, ವಕೀಲರು

error: Content is protected !!