ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸುವಂತೆ ಕಾಂಗ್ರೆಸ್ ಒತ್ತಾಯಿಸಿದ್ದೇಕೆ?, 20ರಂದು ರಾಜ ಭವನ ಮುತ್ತಿಗೆಗೂ ಸಿದ್ಧ ಎಂದ ಜಿ.ಪರಮೇಶ್ವರ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಅದಕ್ಕಾಗಿಯೇ ರಾಜ್ಯದ ಹಲವು ಯೋಜನಗೆಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ, ಸರ್ಕಾರ ಕೂಡಲೇ ಶ್ವೇತ ಪತ್ರ ಹೊರಡಿಸಬೇಕು ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ ಆಗ್ರಹಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ, ಎಸ್.ಸಿ, ಎಸ್.ಟಿ ಯೋಜನೆಗಳಿಗೆ ಅನುದಾನ ಕಡಿತಗೊಳಿಸಲಾಗಿದೆ. ಇದರಿಂದ ರಾಜ್ಯ ಸರ್ಕಾರದ ಸ್ಥಿತಿ ಕೆಟ್ಟದಾಗಿರುವುದು ಗೊತ್ತಾಗುತ್ತದೆ. ಆದ್ದರಿಂದಲೇ ಕರ್ನಾಟಕ ಕಾಂಗ್ರೆಸ್ ಶ್ವೇತ ಪತ್ರ ಹೊರಡಿಸುವಂತೆ ಒತ್ತಾಯಿಸುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅಧಿಕೃತ ವಿರೋಧ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರೂ ಇದ್ದಾರೆ. ನಮ್ಮ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿದ್ದೇವೆ. ಸದನದ ಒಳಗೆ ಮತ್ತು ಹೊರಗೆ ಜನರ ಪರ ದನಿ ಎತ್ತುವ ಕೆಲಸ ಮಾಡುತ್ತಿದ್ದೇವೆ. ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಮುಖಂಡರಿಗೆ ಜವಾಬ್ದಾರಿಯನ್ನೂ ನೀಡಲಾಗಿದೆ. ಇತ್ತೀಚೆಗೆ ಪೂರ್ಣಗೊಂಡ ಗ್ರಾಪಂ ಚುನಾವಣೆಯಲ್ಲಿ ಗೆದ್ದಿದ್ದು ಕಾಂಗ್ರೆಸ್ ವಿನಹ ಬಿಜೆಪಿಯಲ್ಲ.
– ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ

ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರವಿದೆ. ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ. ಆದರೆ, ಆರ್ಥಿಕವಾಗಿ ಪರಿಸ್ಥಿತಿ ಸರಿಯಿಲ್ಲ. ಇದನ್ನು ಒಪ್ಪಿಕೊಳ್ಳುವುದಕ್ಕೂ ಬಿಜೆಪಿ ನೇತೃತ್ವದ ಸರ್ಕಾರ ಸಿದ್ಧವಿಲ್ಲ. ಜತೆಗೆ, ರಾಜ್ಯಕ್ಕೆ ಜಿಎಸ್.ಟಿ. ರೂಪದಲ್ಲಿ ಬರಬೇಕಿದ್ದ 30 ಸಾವಿರ ಕೋಟಿ ರೂಪಾಯಿ ಸಹ ನೀಡಿಲ್ಲ. ಹಾಗಾದರೆ, ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ 26 ಸಂಸದರು ಏಕೆ ಕರ್ನಾಟಕದ ಪರ ಏಕೆ ನಿಲ್ಲುತ್ತಿಲ್ಲ ಎಂದು ಪ್ರಶ್ನಿಸಿದರು.
20ಕ್ಕೆ ರಾಜ ಭವನ ಚಲೋ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಿರಂತರ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ದನಿಯಾಗುವ ಉದ್ದೇಶದಿಂದ ಜನವರಿ 20ರಂದು ರಾಜ ಭವನಕ್ಕೆ ಹೋಗಲು ನಿರ್ಧರಿಸಲಾಗಿದೆ. ಅಂದು ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ ಸೇರಿ ಬಳಿಕ ರಾಜ ಭವನಕ್ಕೆ ಭೇಟಿ ನೀಡಲಾಗುವುದು. ಒಂದುವೇಳೆ, ತಡೆಯಲು ಮುಂದಾದರೆ, ಅದು ಪ್ರತಿಭಟನೆ ಮತ್ತು ಮುತ್ತಿಗೆ ಸ್ವರೂಪ ತಾಳುವ ಸಾಧ್ಯತೆಯೂ ಇದೆ ಎಂದರು.
ಶಾಸಕರಾದ ಬಿ.ಕೆ.ಸಂಗಮೇಶ್, ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮುಖಂಡರಾದ ತೀನ.ಶ್ರೀನಿವಾಸ್, ಶೇಷಾದ್ರಿ ಉಪಸ್ಥಿತರಿದ್ದರು.

error: Content is protected !!