ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಹುಣಸೋಡು ಗ್ರಾಮದ ಕಲ್ಲು ಕ್ರಷರ್ ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಘಟನಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.
* ಅಧಿಕೃತ, ಅನಧಿಕೃತದ ಬಗ್ಗೆ ತನಿಖೆ: ಇಲ್ಲಿ ಕಲ್ಲು ಗಣಿಗಾರಿಕೆ ಅಧಿಕೃತವಾಗಿ ನಡೆಯುತ್ತಿತ್ತೇ ಅಥವಾ ಅನಧಿಕೃತವಾಗಿತ್ತೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಆದಷ್ಟು ಬೇಗನೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲಾಗುವುದು. ಘಟನೆಯನ್ನು ಎಲ್ಲ ಆಯಾಮಗಳಿಂದ ತನಿಖೆ ನಡೆಸಿ ಲೋಪದೋಷಗಳನ್ನು ಪತ್ತೆ ಹಚ್ಚಲಾಗುವುದು ಎಂದು ಹೇಳಿದರು.
ಗಣಿಗಾರಿಕೆಗೆ ಸ್ಫೋಟಕ ಎಲ್ಲಿಂದ ಬಂತು, ಇದಕ್ಕೆ ಪರವಾನಿಗೆ ಇತ್ತೆ, ಸ್ಫೋಟಕ ಸಾಗಾಣಿಕೆಯಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆಯೇ ಎಂಬ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.
* ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಹೈ ಅಲರ್ಟ್: ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಇಂತಹ ದುರ್ಘಟನೆಗಳು ಆಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ರಾಜ್ಯದ ಅಭಿವೃದ್ಧಿಗೆ ಜಲ್ಲಿ ಕಲ್ಲುಗಳ ಪೂರೈಕೆ ಅನಿವಾರ್ಯ. ಆದರೆ ಪರವಾನಗಿ ಇಲ್ಲದೆ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗುವುದಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಅನಧಿಕೃತ ಗಣಿಗಾರಿಕೆ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.