ನಿರಂತರ ಜ್ಯೋತಿಯಲ್ಲಿ ಲೋಪ, ತನಿಖಾ ವರದಿ ಸಲ್ಲಿಕೆಗೆ 15 ದಿನಗಳ ಡೆಡ್ ಲೈನ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಿರಂತರ ಜ್ಯೋತಿ ಕಾಮಗಾರಿ ಅನುಷ್ಠಾನದಲ್ಲಿ ಲೋಪ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ, ಈ ಕುರಿತು ತನಿಖೆ ನಡೆಸಿ 15 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಿರಂತರ ಜ್ಯೋತಿ ಯೋಜನೆ ಅನುಷ್ಠಾನದಲ್ಲಿನ ಲೋಪದೋಷಗಳ ಬಗ್ಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಡಿಸಿ ನೇತೃತ್ವದಲ್ಲಿ ಕಮಿಟಿ | ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು, ವಿಷಯ ತಜ್ಞರು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ಸ್ಥಳೀಯವಾಗಿ ರಚಿಸಲಾಗುವುದು. ಈ ಸಮಿತಿಗೆ ಎಲ್ಲ ಮಾಹಿತಿಯನ್ನು ತಕ್ಷಣ ಒದಗಿಸಬೇಕು. ಸಮಿತಿ ಪರಿಶೀಲನೆ ನಡೆಸಿ 15 ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸಬೇಕು. ಅಗತ್ಯ ಬಿದ್ದರೆ ಹೆಚ್ಚಿನ ತನಿಖೆ ಕೈಗೊಳ್ಳುವ ಕುರಿತು ನಿರ್ಧಾರಿಸಲಾಗುವುದು ಎಂದು ತಿಳಿಸಿದರು.
ಮಾರ್ಗಸೂಚಿ ಉಲ್ಲಂಘನೆ | ಯೋಜನೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಗುತ್ತಿಗೆದಾರನಿಗೆ ಸಂಪೂರ್ಣ ಹಣವನ್ನು ಪಾವತಿಸಲಾಗಿದೆ. ಫೀಡರ್ ಗಳಲ್ಲಿ ಅಳವಡಿಸಿರುವ ಕಂಬಗಳ ಬಗ್ಗೆಯೂ ಸರಿಯಾಗಿ ಲೆಕ್ಕ ಇರುವುದಿಲ್ಲ. ಪ್ರತಿ ಕಂಬಗಳಿಗೆ ಸಂಖ್ಯೆಯನ್ನೂ ನಮೂದಿಸಿರುವುದಿಲ್ಲ. ಕಾಮಗಾರಿ ಆರಂಭಕ್ಕಿಂತ ಮೊಲು ಗುತ್ತಿಗೆದಾರನೊಂದಿಗೆ ಬಾಂಡ್ ಬರೆಯಿಸಿರುವುದಿಲ್ಲ. 2019ರಿಂದ ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನ ಆರಂಭಿಸಲಾಗಿದೆ. ಮೂಲ ಕ್ರಿಯಾ ಯೋಜನೆಯನ್ನು ಉಲ್ಲಂಘಿಸಿ ಕಾಮಗಾರಿ ಅನುಷ್ಠಾನಗೊಳಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದರು.
ಯೋಜನೆ ಅನುಷ್ಠಾನದಲ್ಲಿನ ಲೋಪದೋಷಗಳನ್ನು ಗುತ್ತಿಗೆದಾರನಿಂದ ಸರಿಪಡಿಸಿಕೊಳ್ಳಬೇಕು. ಗುತ್ತಿಗೆದಾರನಿಗೆ ಪಾವತಿಯಾಗಿರುವ ಹಣವನ್ನು ವಸೂಲು ಮಾಡಿ, ಲೋಪಗಳನ್ನು ಕಾನೂನು ಪ್ರಕಾರ ಸರಿಪಡಿಸಬೇಕು. ಮೆಸ್ಕಾಂ ವ್ಯಾಪ್ತಿಯ ಇತರ ಜಿಲ್ಲೆಗಳಲ್ಲಿ ನಡೆದಿರುವ ಯೋಜನೆ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಮೆಸ್ಕಾಂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

error: Content is protected !!