ಸರ್ಕಾರ ಕೈಗೊಂಡ ನಿರ್ಣಯ ವಿರುದ್ಧ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಬಿರುಸಿನ ಚರ್ಚೆ, ಏನದು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ವಸತಿ ಯೋಜನೆ ಅಡಿ ಫಲಾನುಭವಿಗಳನ್ನು ಗ್ರಾಮ ಸಭೆಯಲ್ಲಿ ಆಯ್ಕೆ ಮಾಡುವ ಬದಲು ಆಯಾ ಕ್ಷೇತ್ರದ ಶಾಸಕರೇ ಆಯ್ಕೆ ಮಾಡಿ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸುವ ನಿರ್ಧಾರದ ವಿರುದ್ಧ ವಿರೋಧ ವ್ಯಕ್ತವಾಯಿತು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಈ ಆದೇಶವನ್ನು ಹಿಂಪಡೆದು ಗ್ರಾಮ ಸಭೆಯಲ್ಲಿಯೇ ಆಯ್ಕೆಗೊಂಡ ಫಲಾನುಭವಿಗಳಿಗೆ ವಸತಿ ಯೋಜನೆಯ ಸೌಲಭ್ಯ ಕಲ್ಪಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಂಡು ಅದನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಒತ್ತಾಯಿಸಿದರು.

ಇದನ್ನೂ ಓದಿ । ಇದುವರೆಗೆ ಎರಡು ಮಂಗನ ಕಾಯಿಲೆ ಪತ್ತೆ, ಯಾರಲ್ಲಿ ಸೋಂಕು ದೃಢ?

ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ 20 ಜನ ವಸತಿ ರಹಿತರನ್ನು ಸರ್ಕಾರದ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗ್ರಾಮ ಸಭೆ ಮೂಲಕ ಆಯ್ಕೆ ಮಾಡುವ ಅಧಿಕಾರ ಗ್ರಾಮ ಸಭೆಗಳಿಗಿತ್ತು. ಅದನ್ನು ಸ್ಥಳೀಯ ಶಾಸಕರಿಗೆ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಜಿಪಂ ಸದಸ್ಯ ಕಲಗೋಡು ರತ್ನಾಕರ್, ಶಾಸಕ ಆರ್.ಪ್ರಸನ್ನಕುಮಾರ್ ದನಿಗೂಡಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಗ್ರಾಮ ಸಭೆಯಲ್ಲಿ ಮಂಡಿಸಿ ಆಯ್ಕೆಯಾಗದ ಫಲಾನುಭವಿಗಳ ಪಟ್ಟಿಯನ್ನು ಹಿಂದಿರುಗಿಸಿ ಸರ್ಕಾರದ ನಿಯಮಾನುಸಾರ ಪರಿಶಿಷ್ಟರು-12, ಇತರೆ-5, ಅಲ್ಪಸಂಖ್ಯಾತ -3 ಫಲಾನುಭವಿಗಳು ಆಯ್ಕೆ ಮಾಡಬೇಕು. ಇಲ್ಲದಿದ್ದಲ್ಲಿ ಅಂತಹ ಪಟ್ಟಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಶೌಚಾಲಯ ರಹಿತ 2306 ನೂತನ ಮನೆಗಳನ್ನು ಗುರುತಿಸಲಾಗಿದೆ. ಅಂತಹ ಮನೆಗಳು ಸರ್ಕಾರದ ಯಾವುದೇ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಂಡಿದ್ದರೆ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಡಲಾಗುವುದು. ಅದಕ್ಕಾಗಿ ಸರ್ಕಾರ 8.19ಕೋಟಿ ಅನುದಾನ ಮಂಜೂರು ಮಾಡಿದೆ ಎಂದರು.
ಮತ್ತೊಂದು ಅವಕಾಶ ನೀಡುವಂತೆ ಮನವಿ | ಕಳೆದ ಕೆಲವು ವರ್ಷಗಳಿಂದ ವಿವಿಧ ವಸತಿ ಯೋಜನೆಯಡಿ ಆಯ್ಕೆಯಾಗಿದ್ದ ಸುಮಾರು 15560 ಫಲಾನುಭವಿಗಳು ಅವಕಾಶದಿಂದ ವಂಚಿತರಾಗಿದ್ದಾರೆ. ಅಂತಹ ವಸತಿ ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಅವಕಾಶ ನೀಡಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡುವಂತೆ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಅವರು ಸಭೆಯ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಸೇರಿದಂತೆ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಜಿ.ಪಂ.ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!