ಕಣ್ಣೀರಲ್ಲೇ ಕೈತೊಳೆಯುತ್ತಿದೆ ಪಾಪ ನಾಯ್ಕ್ ಕುಟುಂಬ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಕುಟುಂಬದವರೇ ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ, ಜೀವದ ಹಂಗು ತೊರೆದು ಈ ಕಾರ್ಯ ಮಾಡಿದ ಪಾಪ ನಾಯ್ಕ್ ಗೆ `ಕೊರೊನಾ ವಾರಿಯರ್’ ಬಿರುದಿನ ಹೊರತು ಮತ್ತೇನು ಸಿಕ್ಕಿಲ್ಲ!
ಹೌದು, ಇದು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಪಾಪ ನಾಯ್ಕ್ ಎಂಬಾತನ ಬದುಕಿನಲ್ಲಿ ನಡೆದಿರುವ ದಾರುಣ ಘಟನೆ. ದೈಹಿಕ ವಿಶೇಷಚೇತನರಾಗಿದ್ದ ಇಬ್ಬರು ಮಕ್ಕಳನ್ನು ಇತ್ತೀಚೆಗೆ ಕಳೆದುಕೊಂಡು ಬದುಕಿಗೆ ಆಧಾರವಾಗಿದ್ದ ಪತಿಯನ್ನೂ ಕಳೆದುಕೊಂಡಿದ್ದಾಳೆ. ಈಗ ಈಕೆ ಒಬ್ಬಂಟಿಯಾಗಿದ್ದಾಳೆ. ಈತ ಪತಿಯೂ ಇಲ್ಲ, ದುಡಿಮೆಗೆ ಉದ್ಯೋಗವೂ ಇಲ್ಲ.
ಈಕೆಯ ಪತಿ ಪಾಲಿಕೆಯ ಚಿತಾಗಾರದಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದ್ದ ಶವಗಳ ಸಂಸ್ಕಾರ ಮಾಡುತ್ತಿದ್ದ. ಕರ್ತವ್ಯ ಮಾಡುತ್ತಲೇ ಕೊರೊನಾಗೆ ಬಲಿಯಾಗಿದ್ದಾನೆ. ಮೃತಪಟ್ಟು ಎರಡು ತಿಂಗಳಾಗುತ್ತಾ ಬಂದರೂ ಮಹಾನಗರ ಪಾಲಿಕೆಯಿಂದಾಗಲೀ, ಸರಕಾರದಿಂದಾಗಲಿ ನಯಾ ಪೈಸೆ ಸಿಕ್ಕಿಲ್ಲ. ೪೫ ದಿನಗಳ ಹಿಂದೆಯೇ ಪಾಲಿಕೆ ಆಯುಕ್ತರನ್ನು ಕಾಂಗ್ರೆಸ್ ನಾಯಕರು ಭೇಟಿಯಾಗಿ ಪರಿಹಾರ ನೀಡುವಂತೆ ಕೋರಿದ್ದಾರೆ. ಆದರೆ, ಪ್ರಯೋಜನ ಮಾತ್ರ ಶೂನ್ಯ.
೩೦ ಲಕ್ಷ ರೂ. ಪರಿಹಾರ ಕೊಡುವಂತೆ ಮನವಿ ಮಾಡಲಾಗಿತ್ತು. ತಕ್ಷಣ ೫ ಲಕ್ಷ ರೂ. ಪರಿಹಾರ ಕೊಡಬೇಕೆಂದು ಆಗ್ರಹಿಸಲಾಗಿತ್ತು. ಆದರೆ, ಇದುವರೆಗೆ ಮೃತನ ಪತ್ನಿ ಸವಿತಾ ಅವರಿಗೆ ಪರಿಹಾರ ನೀಡಿಲ್ಲ. ಉದ್ಯೋಗವೂ ಕೊಟ್ಟಿಲ್ಲ ಎಂಬುದು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಎಚ್.ಸಿ. ಯೋಗೇಶ್ ಅವರ ಆರೋಪ.

Leave a Reply

Your email address will not be published. Required fields are marked *

error: Content is protected !!