ಆರ್.ಎಸ್.ಎಸ್. ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಈಶ್ವರಪ್ಪ ಗರಂ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಿಳಿವಳಿಕೆ ಕೊರತೆ ಇರುವುದರಿಂದಲೇ ಕಾಂಗ್ರೆಸ್ ಮುಖಂಡರು ಆರ್.ಎಸ್.ಎಸ್. ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಕಾಂಗ್ರೆಸ್ ಧೂಳು ಪಾಲಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್’ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಇತ್ತೀಚೆಗೆ, ಜವಾಹರ್ ಲಾಲ್ ನೆಹರೂ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್. ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈ ಸಂಸ್ಥೆ ದೇಶ ಪ್ರೇಮ ಹುಟ್ಟಿಸುವ ಕೆಲಸ ಮಾಡುತ್ತಿದೆ. ಗುಡ್ಡಗಾಡು ಪ್ರದೇಶದಲ್ಲೂ ಆರ್.ಎಸ್.ಎಸ್. ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸಂಸ್ಥೆಯ ಬಗ್ಗೆ ಹಗುರವಾಗಿ ಮಾತನಾಡದಂತೆ ಅವರು ಕಾಂಗ್ರೆಸ್ ಮುಖಂಡರಿಗೆ ಮನವಿ ಮಾಡಿದರು.
ಟೀಕೆ ಮಾಡುವುದಕ್ಕೂ ಮುಂಚೆ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಹರಿಪ್ರಸಾದ್ ಅವರು ಆರ್.ಎಸ್.ಎಸ್. ಕುರಿತು ತಿಳಿದುಕೊಳ್ಳಲಿ ಎಂದು ತಿಳಿಸಿದರು.
ಜಾತಿ ಗೊತ್ತಿಲ್ಲದೇ ಸಂಸ್ಕಾರ: ಆರ್.ಎಸ್.ಎಸ್. ಜಾತಿ ಗೊತ್ತಿಲ್ಲದೇ ಸಂಸ್ಕಾರ ನೀಡುತ್ತಿದೆ. ಹೀಗಿರುವಾಗ, ರಾಜಕೀಯ ಲಾಭಕ್ಕಾಗಿ ಹೋದಲೆಲ್ಲ ಸಂಸ್ಥೆಯ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಮುಸ್ಲಿಮರನ್ನು ಸಂತೃಪ್ತಿ ಪಡಿಸುವ ಉದ್ದೇಶದಿಂದ ಮಾಡಿದ ಕುತಂತ್ರಕ್ಕೆ ಕಾಂಗ್ರೆಸ್ ದೇಶದಲ್ಲಿ ನಿರ್ಮೂಲನೆ ಆಗಿದೆ. ಈಗ ಆರ್.ಎಸ್.ಎಸ್. ಬಗ್ಗೆ ಟೀಕಿಸಿದರೆ ಧೂಳು ಸೇರಲಿದೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ನಾಯಕರ ಮಕ್ಕಳುಗಳೇ ಆರ್.ಎಸ್.ಎಸ್.ನಲ್ಲಿ ನೀಡಲಾಗುತ್ತಿರುವ ಸಂಸ್ಕಾರದಿಂದ ಆಕರ್ಷಿತರಾಗುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಅಮೀತ್ ಶಾ, ಬಿ.ಎಸ್.ವೈ. ಸೇರಿದಂತೆ ಎಲ್ಲ ನಾಯಕರನ್ನು ಟೀಕಿಸುತ್ತಿದ್ದಾರೆ. ಆದರೆ, ಆರ್.ಎಸ್.ಎಸ್. ಬಗ್ಗೆ ಹಗುರವಾಗಿ ಮಾತನಾಡುವುದು ನಾನು ಸಹಿಸುವುದಿಲ್ಲ ಎಂದು ಹೇಳಿದರು.
ಪಾಲಿಕೆ ಆಡಳಿತ ಪಕ್ಷ ನಾಯಕ ಎಸ್.ಎನ್. ಚನ್ನಬಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!