ಈಡಿಗರೊಂದಿಗೆ ಒಂದಾದ ಹಲವು ಸಮುದಾಯ, ಹೋರಾಟಕ್ಕೆ ಶೀಘ್ರವೇ ಸಿದ್ಧವಾಗಲಿದೆ ಮುಹೂರ್ತ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ರಚಿಸಿರುವ ಸಮಿತಿ ಕೈಬಿಡುವಂತೆ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿದೆ. ಇದರೊಂದಿಗೆ ಹೋರಾಟದ ಕಾವು ಇನ್ನಷ್ಟು ಭುಗಿಲೇಳುವ ಸಾಧ್ಯತೆ ಇದೆ.
ಈ ಸಂಬಂಧ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಗಂದೂರು ಉಳಿಸಿ ಹೋರಾಟ ಸಮಿತಿ ಉಪಾಧ್ಯಕ್ಷ ಬೇಳೂರು ಗೋಪಾಲಕೃಷ್ಣ, `ದೇವಸ್ಥಾನ ವಿಚಾರದಲ್ಲಿ ಸರ್ಕಾರ ತನ್ನ ಹಠ ಕೈಬಿಡಬೇಕು. ಮುಜರಾಯಿ ಇಲಾಖೆಗೆ ಸೇರಿಸಲು ಸುತಾರಾಂ ಒಪ್ಪುವುದಿಲ್ಲ’ ಎಂದು ಹೇಳಿದರು.
ಹೋರಾಟದ ದಿನಾಂಕ ನಿಗದಿ: ಹಲವು ಹಂತಗಳಲ್ಲಿ ಹೋರಾಟಗಳನ್ನು ಮಾಡಲಾಗಿದೆ. ಮುಂದುವರಿದು ಶೀಘ್ರವೇ ಹೋರಾಟದ ದಿನಾಂಕ, ರೂಪುರೇಷೆ ಸಿದ್ಧಪಡಿಸಲಾಗುವುದು. ಈ ಹೋರಾಟಕ್ಕೆ ದೇವಾಂಗ, ಸಾದುಶೆಟ್ಟಿ, ಉಪ್ಪಾರ, ಕುರುಬ, ಒಕ್ಕಲಿಗ, ಯಾದವ, ಮಡಿವಾಳ, ತಮಿಳು ಸಮಾಜ, ಭೋವಿ,ಸವಿತಾ ಸಮಾಜ, ಗಂಗಾಮತ, ವಿಶ್ವಕರ್ಮ ಸಮಾಜ ಬೆಂಬಲ ವ್ಯಕ್ತಪಡಿಸಿವೆ ಎಂದು ತಿಳಿಸಿದರು.
ದೇವಿಯ ಶಾಪ ತಟ್ಟದೇ ಬಿಡದು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಕ್ತಿ ದೇವತೆಯ ವಿಚಾರಕ್ಕೆ ಕೈಹಾಕಿದ್ದಾರೆ. ಅವರಿಗೆ ದೇವಿಯ ಶಾಪ ತಟ್ಟದೇ ಬಿಡದು ಎಂದು ಬೇಳೂರು ಹೇಳಿದರು.
ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಶ್ರೀಧರ್ ಹುಲ್ತಿಕೊಪ್ಪ, ಉಪಾಧ್ಯಕ್ಷರಾದ ಶ್ರೀಕಾಂತ್, ಎಂ.ಗುರುಮೂರ್ತಿ, ಸಂಚಾಲಕರಾದ ಎಸ್.ರವಿ ಕುಮಾರ್, ಗೀತಾಂಜಲಿ ರತ್ನಾಕರ್, ಎನ್.ಮಂಜುನಾಥ್, ಜಂಟಿ ಕಾರ್ಯದರ್ಶಿ ಜಿ.ಡಿ.ಮಂಜುನಾಥ್ ಪ್ರಮುಖರು ಉಪಸ್ಥಿತರಿದ್ದರು.
ಯಾರು ಏನೆಂದರು?
ಎಲ್ಲ ಸಮಾಜದವರು ಸಿಗಂದೂರು ದೇವಿಗೆ ನಡೆದುಕೊಳ್ಳುತ್ತಾರೆ. ನಾನೂ ದೇವಿಯ ಭಕ್ತ. ಸರ್ಕಾರ ದೇವಸ್ಥಾನದ ವಿಚಾರದಲ್ಲಿ ಮೂಗು ತೂರಿಸುತ್ತಿರುವುದು ರಿಯಲ್ಲ. ಕೂಡಲೇ ಸಲಹೆ ಮತ್ತು ಮೇಲ್ವಿಚಾರಣೆ ಸಮಿತಿ ರದ್ದುಪಡಿಸಬೇಕು. ಸಿಗಂದೂರು ಉಳಿಸಿ ಹೋರಾಟಕ್ಕೆ ನಮ್ಮಿಂದು ಪೂರ್ಣ ಸಹಕಾರವಿದೆ.
– ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್

ರಾಜ್ಯ ಸರ್ಕಾರ ಸಿಗಂದೂರು ದೇವಸ್ಥಾನದ ಟ್ರಸ್ಟ್ ಹಣದ ಲೆಕ್ಕ ಕೇಳುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಕುಟುಂಬದ ಒಡೆತನದ ಹೊಂದಿರುವ ಪ್ರೇರಣಾ ಟ್ರಸ್ಟ್ ಲೆಕ್ಕ ಕೊಡಲಿ.
– ಪ್ರಗತಿಪರ ಹೋರಾಟಗಾರ ಕೆ.ಪಿ.ಶ್ರೀಪಾಲ್

Leave a Reply

Your email address will not be published. Required fields are marked *

error: Content is protected !!