ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿಯ ವಿ.ಐ.ಎಸ್.ಎಲ್. ಕಾರ್ಖಾನೆ ಉದ್ಧಾರ ಮಾಡುವುದಾಗಿ ಭರವಸೆ ನೀಡಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ರಾಘವೇಂದ್ರ ಅವರ ಭರವಸೆ ಇದುವರೆಗೆ ಈಡೇರಿಲ್ಲ. ಕೇಂದ್ರದಿಂದ ಆರು ಸಾವಿರ ಕೋಟಿ ರೂ. ತರುವುದಾಗಿ ಹೇಳಲಾಗಿತ್ತು. ಆದರೆ, ಇದುವರೆಗೆ ಆರು ರೂ. ಕೂಡ ತಂದಿಲ್ಲ ಎಂದು ವಿ.ಐ.ಎಸ್.ಎಲ್ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ, ಹಿರಿಯ ಕಾರ್ಮಿಕ ಮುಖಂಡ ಬಾಲಕೃಷ್ಣ ಆರೋಪಿಸಿದರು.
ಕಾರ್ಖಾನೆ ಖಾಸಗೀಕರಣದ ವಿರುದ್ಧ ಸಾಕಷ್ಟು ಹೋರಾಟ ಮಾಡಲಾಗಿದೆ. ಸಂಸದ ಬಿ.ವೈ ರಾಘವೇಂದ್ರ ಅವರ ಮನೆಯಿಂದ ನವದೆಹಲಿಯ ಕಚೇರಿಗೂ ಓಡಾಡಿದ್ದೇವೆ. ಈ ಸಂಬಂಧ 400 ಪುಟಗಳ ಮನವಿ ಕೂಡ ನೀಡಲಾಗಿದೆ. ಆದರೆ ಇದರಿಂದ ಯಾವ ಪ್ರಯೋಜನ ಆಗಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
2016ರಲ್ಲಿ ಸಂಸದರಾಗಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಸಕ್ತ ಸಂಸದರಾಗಿರುವ ಬಿ.ವೈ.ರಾಘವೇಂದ್ರ ಅವರು ಕಾರ್ಖಾನೆ ಖಾಸಗಿ ಪಾಲಾಗಲು ಬಿಡುವುದಿಲ್ಲ ಎಂದು ಹೇಳಿದ್ದರು. ರಾಜ್ಯ ಸರ್ಕಾರ ಕಬ್ಬಿಣದ ಅದಿರಿನ ಗಣಿ ಮಂಜೂರು ಮಾಡಿದ್ದಲ್ಲಿ ಕೇಂದ್ರದಿಂದ ಇದಕ್ಕಾಗಿ ಬಂಡವಾಳ ಹೂಡಿಕೆ ಮಾಡಲಾಗುವುದು ಎಂದು ತಿಳಿಸಿದ್ದರು. ನೀಡಿದ್ದ ವಾಗ್ದಾನಗಳು ಗಾಳಿಗೆ ತೂರಿದ್ದಾರೆ ಎಂದು ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೆ.ಜಗದೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ಮಣಿಶೇಖರ್, ಕಾಂಗ್ರೆಸ್ ಅಧ್ಯಕ್ಷ ಚಂದ್ರೇಗೌಡ, ಜೆಡಿಎಸ್ ಅಧ್ಯಕ್ಷ ಕರುಣಾ ಮೂರ್ತಿ, ಗುತ್ತಿಗೆ ಕಾರ್ಮಿಕರ ಸಂಘದ ಸುರೇಶ್, ಆಮ್ ಆದ್ಮಿ ಪಕ್ಷದ ರವಿ, ಸುರೇಶ್, ಕೆಂಪಯ್ಯ, ನರಸಿಂಹಾಚಾರ್ ಪಾಲ್ಗೊಂಡಿದ್ದರು.
ಭದ್ರಾವತಿ ನಗರಕ್ಕೆ ಆಗಲಿರುವ ಅನ್ಯಾಯ ತಡೆಯುವ ಉದ್ದೇಶದಿಂದ ವಿಐಎಸ್‌ಎಲ್ ಉಳಿಸಿ ಹೋರಾಟ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ನವೆಂಬರ್ 28ರಂದು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಭೇಟಿ ನೀಡಲಿದೆ. ಅವರು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುವುದರ ಆಧಾರದ ಮೇಲೆ ಹೋರಾಟದ ರೂಪು ರೇಷೆ ತೀರ್ಮಾನಿಸಲಾಗುವುದು.
– ಬಾಲಕೃಷ್ಣ, ಹಿರಿಯ ಕಾರ್ಮಿಕ ಮುಖಂಡ