ಮಲೆನಾಡಿನ ಐದು ಜಿಲ್ಲೆಗಳಿಗೆ ವರವಾಗಲಿದೆ ಈ ಪ್ರಾಂತೀಯ ಕಚೇರಿ, ಏನಿದು, ಕಾರ್ಯನಿರ್ವಹಣೆ ಹೇಗೆ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ಸ್ಥಳೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಸಕಾಲದಲ್ಲಿ ಪರಿಹಾರ ಕಂಡುಕೊಳ್ಳಲು ಈ ಪ್ರಾಂತೀಯ ಕಚೇರಿ ಸಹಕಾರಿಯಾಗಲಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಹಳೆ ಕಟ್ಟಡದ ಎರಡನೇ ಮಹಡಿಯಲ್ಲಿ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡಂತೆ ಪ್ರಾಂತೀಯ ಕಚೇರಿಯನ್ನು ಉದ್ಘಾಟಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ. ಆಂತೋಣಿ ಸಬ್ಯಾಸ್ಟಿನ್ ಮಾತನಾಡಿದರು.
ಕಾರ್ಯ ವ್ಯಾಪ್ತಿ ವಿಕೇಂದ್ರೀಕರಣ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಾರ್ಯವ್ಯಾಪ್ತಿ ವಿಕೇಂದ್ರೀಕರಿಸುವ ಮತ್ತು ವಿಸ್ತರಿಸಲು ಕಚೇರಿ ಕಾರ್ಯನಿರ್ವಹಿಸಲಿದೆ. ನ್ಯಾಯಾಲಯದಂತೆ ಕಾರ್ಯನಿರ್ವಹಿಸುವ ಈ ಆಯೋಗದಲ್ಲಿ ದಾಖಲಾಗುವ ಪ್ರಕರಣಗಳಿಗೆ 24 ಗಂಟೆಯ ಅವಧಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಹಕಾರಿಯಾಗಲಿದೆ. ಬಾಲ್ಯವಿವಾಹ ನಿಯಂತ್ರಣಕ್ಕೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಪ್ರಯೋಜನ: ಬಾಲ್ಯವಿವಾಹ, ಬಾಲಕಾರ್ಮಿಕ, ಮಕ್ಕಳ ಮೇಲೆ ನಡೆಯುವ ಅತ್ಯಾಚಾರ, ಲೈಂಗಿಕ ಕಿರುಕುಳ, ಶೋಷಣೆ, ಮಕ್ಕಳ ಸಾಗಾಣೆ, ಮಕ್ಕಳ ಮಾರಾಟ, ಮಕ್ಕಳ ಕಾಣೆ ಪ್ರಕರಣಗಳು, ಶಾಲೆಗಳಿಗೆ ಸಂಬಂಧಿಸಿದ ದೂರುಗಳನ್ನು ನೀಡಲು ಪ್ರಾಂತೀಯ ಕಚೇರಿ ಉಪಯುಕ್ತ ಆಗಲಿದೆ. ಇದು ಪ್ರತಿ ಬುಧವಾರ ಮತ್ತು ಶನಿವಾರ ಬೆಳಗ್ಗೆ 10.30ರಿಂದ ಸಂಜೆ 4.30ರ ವರೆಗೆ ಕಾರ್ಯನಿರ್ವಹಿಸಲಿದೆ ಎಂದು ಆಯೋಗದ ಸದಸ್ಯ ಡಿ.ಶಂಕರಪ್ಪ ಹೇಳಿದರು.
ದತ್ತು ಸ್ವೀಕಾರ ಕೇಂದ್ರಕ್ಕೆ ಬೇಡಿಕೆ: ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಮಾತನಾಡಿ, ಬಹುದಿನಗಳ ಬೇಡಿಕೆಯಾಗಿರುವ ದತ್ತು ಸ್ವೀಕಾರ ಕೇಂದ್ರ ಆರಂಭಿಸುವ ಅಗತ್ಯವಿದೆ. ಮಕ್ಕಳ ರಕ್ಷಣೆಗಾಗಿ ಆಯೋಗವು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಸರಸ್ವತಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಹೆಚ್ಚುವರಿ ಎಸ್.ಪಿ. ಎಚ್.ಟಿ.ಶೇಖರ್, ಆಯೋಗದ ಸದಸ್ಯರಾದ ಪರಶುರಾಮ್, ರೇಖಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಸಿ.ಸುರೇಶ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!