ಬ್ರಾಹ್ಮಣ ಮಹಾಸಭಾದಿಂದ ಮಂಡೇನಕೊಪ್ಪದಲ್ಲಿ ಗೋಶಾಲೆ, 300 ಹಸುಗಳಿಗೆ ಆಶ್ರಯದ ಕನಸು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಈಗಾಗಲೇ 70ಕ್ಕೂ ಅಧಿಕ ಗೋವುಗಳನ್ನು ಆಶ್ರಯ ನೀಡಿರುವ ಗೋಶಾಲೆಯನ್ನು ಇನ್ನೂ ಉನ್ನತ್ತಕ್ಕೆ ಕೊಂಡೊಯ್ಯುವ ಕನಸಿದೆ. ಆದರೆ, ಅದಕ್ಕಾಗಿ ನಾಗರಿಕರ ಸಹಾಯಬೇಕಿದೆ.
ಎನ್.ಆರ್.ಪುರ ರಸ್ತೆಯಲ್ಲಿರುವ ಮಂಡೇನಕೊಪ್ಪದಲ್ಲಿ ಜಿಲ್ಲಾ ಬ್ರಾಹ್ಮಣದ ಮಹಾಸಭಾದಿಂದ ಸುರಭಿ ಹೆಸರಿನ ಗೋಶಾಲೆ ಆರಂಭಿಸಲಾಗಿದ್ದು, ನವೆಂಬರ್ 30ರಂದು ಪ್ರವೇಶೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಮಹಾಸಭಾದ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
9 ಎಕರೆ ಭೂಮಿ ಇದಕ್ಕಾಗೇ ಗುತ್ತಿಗೆ ಪಡೆದಿದ್ದು, ಎರಡು ಸುಸಜ್ಜಿತ ಕೊಟ್ಟಿಗೆಗಳಿವೆ. ಶುದ್ದ ಗೋಮೂತ್ರ ಸಂಗ್ರಹದೊಂದಿಗೆ ಸಾವಯವ ಗೊಬ್ಬರ ಸಂಗ್ರಹಣೆಯೂ ಇಲ್ಲಿ ಮಾಡಲಾಗುವುದು.
ಗೋಧೋಳಿ ಲಗ್ನದಲ್ಲಿ ಪ್ರವೇಶೋತ್ಸವ: ನವೆಂಬರ್ 30ರಂದು ಸಂಜೆ 5.53ರಿಂದ 6ರವರೆಗೆ ಗೋಧೋಳಿ ಲಗ್ನವಿದೆ. ಈ ಸಂದರ್ಭದಲ್ಲಿಯೇ ಪ್ರವೇಶೋತ್ಸವ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಬಾಳಗಾರು ಆರ್ಯ ಅಕ್ಷೆಭ್ಯ ತೀರ್ಥಮಠದ ಶ್ರೀ ರಘುಭೂಷಣ ತೀರ್ಥ ಶ್ರೀಪಾದಂಗಳವರು ಸಾನ್ನಿಧ್ಯ ವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಉಪ ಮೇಯರ್ ಸುರೇಖಾ ಮುರಳೀಧರ್, ಜಿ.ಪಂ. ಸದಸ್ಯೆ ಹೇಮಾವತಿ ಶಿವಲಿಂಗಪ್ಪ, ತಾ.ಪಂ. ಸದಸ್ಯ ಮುನಿರತ್ನ, ಮಾಜಿ ವಿಧಾನಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್, ಗಾಯಿತ್ರಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಚ್.ವಿ.ಸುಬ್ರಮಣ್ಯ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಉಪ ಮೇಯರ್ ಸುರೇಖಾ ಮುರಳೀಧರ್, ಕೇಶವ್ ಮೂರ್ತಿ, ಶಂಕರ್ ನಾರಾಯಣ, ಉಷಾ, ಜೋಯಿಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!