ಇಂದಿನಿಂದ ಕಸ ವಿಂಗಡಣೆ ಕಡ್ಡಾಯ, ಯಾವ ದಿನ ಯಾವ ಕಸ ಸಂಗ್ರಹ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇನ್ನು ಮುಂದೆ ಪ್ರತಿ ಭಾನುವಾರ ಮತ್ತು ಬುಧವಾರವಷ್ಟೇ ಒಣ ಕಸ ಸಂಗ್ರಹಿಸಲಾಗುವುದು. ಇನ್ನುಳಿದ ದಿನಗಳಂದು ಹಸಿ ಕಸ ಸಂಗ್ರಹಿಸಲಾಗುವುದು. ಹೀಗಾಗಿ, ಪ್ರತಿಯೊಂದು ಮನೆಯವರು ಮನೆಯ ಹಂತದಲ್ಲಿಯೇ ಕಸ ವಿಂಗಡಿಸಿ ನೀಡಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.
ಮಹಾನಗರ ಪಾಲಿಕೆಯಿಂದ ಮನೆ ಮನೆಗೆ ಕಸ ಸಂಗ್ರಹಿಸಲು ಬರುವ ಗಾಡಿಗಳಿಗೆ ಇನ್ನು ಮುಂದೆ ಒಣ ಮತ್ತು ಹಸಿ ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ನೀಡುವಂತೆ ಸೂಚನೆ ನೀಡಲಾಗಿದೆ. ಹಾಗೊಮ್ಮೆ ವಿಂಗಡಿಸದೇ ನೀಡಿದ್ದಲ್ಲಿ ಅಂತಹ ಕಸ ಸಂಗ್ರಹವಾಗುವುದಿಲ್ಲ.
ಒಣ ಕಸ: ಪೇಪರ್, ಪ್ಲಾಸ್ಟಿಕ್, ಗ್ಲಾಸ್‌ ಚೂರುಗಳು ಮತ್ತು ಇತರೆ ಕಚ್ಚಾ ವಸ್ತುಗಳನ್ನು ಸಂಗ್ರಹಿಸಲಾಗುವುದು.
ಹಸಿ ಕಸ: ಕೊಳೆತ ತರಕಾರಿ, ಅಡುಗೆ ಮನೆಯ ತ್ಯಾಜ್ಯ ಸಂಗ್ರಹಿಸಲಾಗುವುದು. ಇದಲ್ಲದೇ ಬಯೋಮೆಡಿಕಲ್ ತ್ಯಾಜ್ಯ ಅಂದರೆ ಮಾಸ್ಕ್, ಗೌಸ್ ಗಳನ್ನು ವಿಂಗಡಿಸಿ ಪ್ರತಿ ದಿನ ನೀಡಬೇಕೆಂದು ಕೋರಲಾಗಿದೆ.
ಒಂದುವೇಳೆ, ಕಸ ವಿಂಗಡಿಸಿ ನೀಡದೇ ಇರುವವರಿಗೆ ಕಾರ್ಪೋರೇಷನ್ ಆಕ್ಟ್ ಮತ್ತು ಘನತ್ಯಾಜ್ಯ ನಿರ್ವಹಣೆ ಉಪ ಅಧಿನಿಯಮ 2019ರ ರೀತ್ಯಾ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!