ಕುವೆಂಪು ವಿವಿಯಲ್ಲಿ ದುಬಾರಿ ಹಾಸ್ಟೆಲ್ ಶುಲ್ಕ ವಸೂಲಿ ವಿರುದ್ಧ ಯುವ ಕಾಂಗ್ರೆಸ್ ಕೆಂಡಾಮಂಡಲ, ಮುತ್ತಿಗೆ ಎಚ್ಚರಿಕೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿ ವಸತಿ ನಿಲಯದಲ್ಲಿ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.
ಕುಲಪತಿಗಳಿಗೆ ಪರೀಕ್ಷಾಂಗ ಕುಲಸಚಿವರ ಮೂಲಕ ಮಂಗಳವಾರ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಹಾಸ್ಟೆಲ್ ಪ್ರವೇಶ ಶುಲ್ಕದಲ್ಲಿ ಸುಲಿಗೆ ಮಾಡಲಾಗುತ್ತಿದೆ. ಇದರಿಂದ ಬಡ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.
ನೂರಾರು ಕನಸುಗಳನ್ನು ಹೊತ್ತು ಸ್ನಾತಕೋತ್ತರ ಶಿಕ್ಷಣ ಪಡೆಯಲು ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಅದಕ್ಕಿರುವ ಪ್ರವೇಶ ಶುಲ್ಕ ಭರಿಸುವುದಕ್ಕಾಗಿ ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ. ಹೀಗಾಗಿ, ಅದನ್ನು ಕಡಿಮೆ ಮಾಡಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ವಾರ್ಷಿಕ ಮುಂಗಡವಾಗಿ 8500ದಿಂದ 9080ವರೆಗೆ ಶುಲ್ಕ ಪಡೆಯಲಾಗುತ್ತಿದೆ. ಪ್ರತಿ ತಿಂಗಳು ಊಟದ ಖರ್ಚು ಮತ್ತು ವಿದ್ಯುತ್ ಬಿಲ್ಲನ್ನು ವಿದ್ಯಾರ್ಥಿಗಳಿಂದಲೇ ಪಡೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳು ಹಾಸ್ಟೆಲ್ ಬಿಡುವಾಗ ಡಿಪಾಸಿಟ್ ಮೊತ್ತದಲ್ಲಿ ಊಟದ ಬಾಬ್ತು ಕಡಿತಗೊಳಿಸಿ ಬಾಕಿ ಹಣ ವಾಪಸ್ ಕೊಡಬೇಕು. ಆದರೆ, ಅಭಿವೃದ್ಧಿ ಶುಲ್ಕ, ಕೊಠಡಿ ಬಾಡಿಗೆ ಶುಲ್ಕ, ನೌಕರರ ಕಲ್ಯಾಣ ನಿಧಿ ಮತ್ತು ಮಿಸಲೇನಿಯಸ್ ಹೆಸರಿನಲ್ಲಿ ಡೆಪಾಸಿಟ್ ನಿಂದಲೂ ಹಣ ಮುರಿದುಕೊಳ್ಳಲಾಗುತ್ತಿದೆ. ಅಂದರೆ, ಡಿಪಾಸಿಟ್ ಹಣದಲ್ಲಿ 2 ಸಾವಿರ ರೂ. ಮಾತ್ರವೇ ಡಿಪಾಸಿಟ್ ಹಣ ಎಂದು ಅಂತಿಮವಾಗಿ ಲೆಕ್ಕ ತೋರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಮಿತಿಯ ಗೌರವಾಧ್ಯಕ್ಷ ನಿತೀನ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಲೋಕೇಶ್, ಉಪಾಧ್ಯಕ್ಷ ಎಸ್. ಕುಮರೇಶ್, ನಗರ ಉಪಾಧ್ಯಕ್ಷ ಡಿ. ಪುಷ್ಪಕ್ ಕುಮಾರ್, ಕೆ.ಎಲ್.ಪವನ್, ಜೈದುಲ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಕುಲಪತಿಗಳು ಸರಿಪಡಿಸಬೇಕು. ಇಲ್ಲದಿದ್ದರೆ, ಡಿಸೆಂಬರ್ 3ರಂದು ನಡೆಯಲಿರುವ ವಿಶ್ವವಿದ್ಯಾಲಯದ ಸಭೆಗೆ ಮುತ್ತಿಗೆ ಹಾಕಲಾಗುವುದು.
– ಎಚ್.ಪಿ.ಗಿರೀಶ್, ಅಧ್ಯಕ್ಷರು, ಯುವ ಕಾಂಗ್ರೆಸ್ ಸಮಿತಿ, ಶಿವಮೊಗ್ಗ

Leave a Reply

Your email address will not be published. Required fields are marked *

error: Content is protected !!