ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ 27 ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯುವುದಿಲ್ಲ. ಒಟ್ಟು 271 ಪಂಚಾಯಿತಿಗಳಿದ್ದು ಅದರಲ್ಲಿ 244ಕ್ಕೆ ಎರಡು ಹಂತಗಳಲ್ಲಿ ಲೋಕಲ್ ಫೈಟ್ ನಡೆಯಲಿದೆ.
ಏಳು ಗ್ರಾಮ ಪಂಚಾಯಿತಿಗಳ ಐದು ವರ್ಷದ ಅಧಿಕಾರ ಅವಧಿ ಪೂರ್ಣಗೊಂಡಿಲ್ಲ. ಹೀಗಾಗಿ, ಕುಂಸಿ, ಪುರದಾಳು, ಕೋಮಾರನಹಳ್ಳಿ, ವೀರಾಪುರ, ಹಾರೋಗೊಪ್ಪ, ತರಲಘಟ್ಟ, ಚುರ್ಚಿಗುಂಡಿಗಳಲ್ಲಿ ಚುನಾವಣೆ ನಡೆಯುವುದಿಲ್ಲ.
ಇನ್ನು 20 ಪಂಚಾಯಿತಿಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಪೂರ್ಣ ಅಥವಾ ಭಾಗಶಃ ಪರಿವರ್ತನೆಗೊಂಡಿವೆ. ಹೀಗಾಗಿ, ಅಲ್ಲಿಯೂ ಚುನಾವಣೆ ಇರುವುದಿಲ್ಲ.
ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೊಳೆಹೊನ್ನೂರು, ಸಿದ್ಲೀಪುರ, ಹನುಮಂತಾಪುರ, ಎಮ್ಮೇಹಟ್ಟಿ. ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯ ತಡಗಣಿ, ಉಡುಗಣಿ. ಸೊರಬ ಪುರಸಭೆ ವ್ಯಾಪ್ತಿಯ ಹಳೆಸೊರಬ, ಕೊಡಕಣಿ, ತವನಂದಿ, ಹೆಚ್ಚೆ, ಮುಟುಗುಪ್ಪೆ. ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆನವಟ್ಟಿ, ಕುಬಟೂರು, ಸಮನಹಳ್ಳಿ, ತಲ್ಲೂರು, ಕಾತುವಳ್ಳಿ, ಅಗಸನಹಳ್ಳಿ, ಎಣ್ಣೆಕೊಪ್ಪ, ತತ್ತೂರು, ಗೆಂಡ್ಲ ಪಂಚಾಯಿತಿಗಳಲ್ಲಿ ಮತದಾನ ನಡೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
- 244 ಗ್ರಾಪಂಗಳಲ್ಲಿ 2609 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1415 ಮತಗಟ್ಟೆಗಳಿವೆ. ಒಟ್ಟು 812126 ಅರ್ಹ ಮತದಾರರಿದ್ದಾರೆ. ಇವರಲ್ಲಿ 4,06,446 ಪುರುಷ, 4,05,680 ಮಹಿಳಾ ಮತದಾರರು ಇದ್ದಾರೆ.
- ಶಿವಮೊಗ್ಗ ತಾಲೂಕಿನಲ್ಲಿ 1,40,072 ಮತದಾರರಿದ್ದು, ಅತಿ ಕಡಿಮೆ ಅಂದರೆ ಹೊಸನಗರದಲ್ಲಿ 92,474 ಮತದಾರರು ಇದ್ದಾರೆ.
- ಚುನಾವಣೆ ಸುಗಮವಾಗಿ ನಡೆಸಲು 244 ಚುನಾವಣಾಧಿಕಾರಿಗಳು ಹಾಗೂ 244 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
- ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ.
- 1557 ಅಧ್ಯಕ್ಷ ಅಧಿಕಾರಿಗಳು ಹಾಗೂ 4671 ಮತಗಟ್ಟೆ ಸಿಬ್ಬಂದಿ ಸೇರಿ ಒಟ್ಟು 6228 ಜನರಿಗೆ ತರಬೇತಿ ನೀಡಲು ಕ್ರಮ ವಹಿಸಲಾಗಿದೆ.
ಮೊದಲನೇ ಹಂತ: ಶಿವಮೊಗ್ಗ ಉಪ ವಿಭಾಗದ ಶಿವಮೊಗ್ಗ 40 ಗ್ರಾಪಂ, ಭದ್ರಾವತಿ 35 ಮತ್ತು ತೀರ್ಥಹಳ್ಳಿ ತಾಲೂಕಿನ 38 ಗ್ರಾಪಂಗಳಿಗೆ ಡಿಸೆಂಬರ್ 22ರಂದು ಚುನಾವಣೆ ನಡೆಯಲಿದೆ.
ಎರಡನೇ ಹಂತ: ಸಾಗರ ಉಪ ವಿಭಾಗದ ಸಾಗರ 27, ಶಿಕಾರಿಪುರ 39, ಸೊರಬ 35, ಹೊಸನಗರದ 30 ಗ್ರಾಪಂಗಳಿಗೆ ಡಿಸೆಂಬರ್ 27ರಂದು ಮತದಾನ ನಡೆಯಲಿದೆ.
ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಪಾರದರ್ಶಕವಾಗಿ ಮತ್ತು ಕಟ್ಟುನಿಟ್ಟಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚುನಾವಣೆ ನಡೆಯುವ ಗ್ರಾಪಂ ವ್ಯಾಪ್ತಿಯಲ್ಲಿ ಡಿಸೆಂಬರ್ 31ರ ವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆಯು ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ನಗರ ಪಾಲಿಕೆ ಮತ್ತು ಮಹಾನಗರ ಪಾಲಿಕೆ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ. ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟಗಳಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ.
– ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ, ಶಿವಮೊಗ್ಗ
ಗ್ರಾಮ ಪಂಚಾಯಿತಿ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ