ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಸ್ ಅಪಘಾತಕ್ಕೆ ಪರಿಹಾರ ನೀಡಲು ನಿರಾಕರಿಸಿದ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡುವಂತೆ ಆದೇಶಿಸಿದೆ.
ಎದುರುದಾರು ಅರ್ಜಿದಾರರಿಗೆ ಪಾಲಿಸಿಗೆ ಅನುಗುಣವಾಗಿ ಬಸ್ ರಿಪೇರಿಯ ಖರ್ಚು 1,28,486 ರೂ.ಗಳನ್ನು ಶೇ.9 ವಾರ್ಷಿಕ ಬಡ್ಡಿಯೊಂದಿಗೆ ಪಾವತಿಸುವುದು. ಹಾಗೂ ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರ 15,000 ರೂ. ಮತ್ತು ವ್ಯಾಜ್ಯದ ಖರ್ಚು ವೆಚ್ಚಗಳ ಬಾಬ್ತು 10,000 ರೂ.ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಬಾಂಡ್ಯ ಅವರ ಪೀಠವು ಆದೇಶಿಸಿದೆ.
READ | ಶಿವಮೊಗ್ಗ ಜಿಲ್ಲೆಯ ಮತಗಟ್ಟೆಗಳ ಸುತ್ತ 48 ಗಂಟೆ ನಿಷೇಧಾಜ್ಞೆ, ಏನೆಲ್ಲ ನಿಬಂಧನೆ ಅನ್ವಯ?
ಏನಿದು ಪ್ರಕರಣ?
ಅರ್ಜಿದಾರರಾದ ಜಯಶ್ರೀ ಶೆಣೈ ಕೆ.ಬಿ. ಜಯಪ್ರಕಾಶ್ ಎಂಬುವವರು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂ., ಲಿ., ಭದ್ರಾವತಿ ಮತ್ತು ಶಿವಮೊಗ್ಗ ಇವರ ವಿರುದ್ಧ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ವಿಮಾ ಮೊತ್ತ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ.
ಜಯಶ್ರೀ ಶೆಣೈ ಕೆ.ಬಿ. ಜಯಪ್ರಕಾಶ್ ಇವರು ವಿಜಯಾ ಮೋಟಾರ್ ಸರ್ವೀಸ್ ನ ಬಸ್ ಮಾಲೀಕರಾಗಿದ್ದು, 2022 ರಲ್ಲಿ ಈ ಕಂಪನಿಯ ಬಸ್ ಅಪಘಾತಕ್ಕೊಳಗಾಗಿ ಹಾನಿಯಾಗಿದ್ದು, ಈ ಸಂಬಂಧ ನ್ಯೂ ಇಂಡಿಯಾ ಅಶ್ಯೂರನ್ಸ್ ಕಂಪೆನಿಯನ್ನು ಸಂಪರ್ಕಿಸಿ ವಿಮಾ ಪರಿಹಾರ ಮೊತ್ತ ಸಂದಾಯ ಮಾಡುವಂತೆ ಕೋರಿರುತ್ತಾರೆ. ಆದರೆ ಕಂಪನಿಯವರು ಬಸ್ ಮಾಲೀಕ ದಿ.ಜಯಪ್ರಕಾಶ್ ಹೆಸರಿನ ಆರ್.ಸಿ. ವರ್ಗಾವಣೆಯ ನಂತರ ಕಾನೂನಿಗೆ ಅನುಸಾರವಾಗಿ 14 ದಿನಗಳೊಳಗಾಗಿ ವಿಮಾ ಪಾಲಿಸಿಯನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಂಡಿರುವುದಿಲ್ಲ ಮತ್ತು ಬಸ್ ಅಪಘಾತಕ್ಕೊಳಗಾದ ದಿನ ಊರ್ಜಿತ ಪರವಾನಿಗೆ ಇಲ್ಲದೆ ಎಂಬ ಕಾರಣ ನೀಡಿ ಪರಿಹಾರ ಮೊತ್ತ ನೀಡಲು ನಿರಾಕರಿಸಿರುತ್ತಾರೆ.
ಆಯೋಗವು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಅರ್ಜಿದಾರರು ಬಸ್ ಮಾಲೀಕ ದಿ.ಕೆ.ಬಿ ಜಯಪ್ರಕಾಶ್ ಅವರ ಪತ್ನಿಯಾಗಿದ್ದು ಕಾನೂನುಬದ್ಧ ಹಕ್ಕುದಾರರಾಗಿರುತ್ತಾರೆ. ಆದ್ದರಿಂದ ಪಾಲಿಸಿಯ 10ನೇ ನಿಬಂಧನೆಯ ಪ್ರಕಾರ ವಿಮಾದಾರರ ಮರಣದ ದಿನಾಂಕದಿಂದ ಮೂರು ತಿಂಗಳ ಒಳಗಾಗಿ ಯಾವುದೇ ಅವಧಿಯಲ್ಲಿ ವಿಮಾ ಪಾಲಿಸಿಯನ್ನು ಬದಲಾಯಿಸಿಕೊಳ್ಳಲು ಅರ್ಹರಾಗಿರುತ್ತಾರೆ. ಹೀಗಾಗಿ ಅಪಘಾತಕ್ಕೊಳಗಾದ ವಾಹನಕ್ಕೆ ಸಂಬಂಧಿಸಿದ ಹಾನಿಯ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆಂದು ಪರಿಗಣಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.