ಬಜೆಟ್‍ನಲ್ಲಿ ಮಹಿಳೆಯರ ಅಭಿವೃದ್ಧಿ, ನೀರಾವರಿ ಯೋಜನೆಗೆ ಒತ್ತು, ಸಿಎಂ ಯಡಿಯೂರಪ್ಪ ಘೋಷಣೆ

 

 

ಸುದ್ದಿ ಕಣಜ.ಕಾಂ
ಸೊರಬ: ಮುಂಬರುವ ರಾಜ್ಯ ಬಜೆಟ್ ನಲ್ಲಿ ಮಹಿಳೆಯರು ಅಭ್ಯುದಯ ಹಾಗೂ ನೀರಾವರಿ ಯೋಜನೆಗಳಿಗೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದರು.

ಇದನ್ನೂ ಓದಿ । ಉತ್ತರ ಕನ್ನಡದ ನೆಲದಲ್ಲಿ ಕನ್ನಡ ಭಾಷೆಯ ಪ್ರಾಚೀನತೆ

ಸೊರಬ ತಾಲೂಕು ಆನವಟ್ಟಿಯಲ್ಲಿ ಮೂಗೂರು ಏತ ನೀರಾವರಿ ಯೋಜನೆ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ವರದಾ ನದಿಯಿಂದ ನೀರನ್ನು ಎತ್ತಿ 105 ಕೋಟಿ ರೂ. ವೆಚ್ಚದಲ್ಲಿ 31 ಕೆರೆಗಳನ್ನು ತುಂಬಿಸುವ ಯೋಜನೆ ಲೋಕಾರ್ಪಣೆ ಮಾಡಲಾಗಿದೆ. ಸೊರಬ ತಾಲೂಕಿನ ಹಲವು ಗ್ರಾಮಗಳ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಅಂತರ್ಜಲ ಹೆಚ್ಚಳ ಇದರಿಂದ ಸಾಧ್ಯವಾಗಲಿದೆ ಎಂದರು.

ಹಲವು ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸಿ ಅಭಿವೃದ್ಧಿ ಪಥದತ್ತ ದೃಢ ಹೆಜ್ಜೆ ಇಟ್ಟಿದ್ದೇವೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಹಲವು ಯೋಜನೆಗಳ ಅನುಷ್ಠಾನಗೊಳಿಸಲಾಗಿದೆ.
ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

9 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ಭಾಗದ 15 ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಉಳವಿ ಗ್ರಾಮದಲ್ಲಿ ನೂತನ ರೈತ ಸಂಪರ್ಕ ಕೇಂದ್ರ, ಗುಡವಿ ಗ್ರಾಮದಲ್ಲಿ ಆಯುರ್ವೇದ ಆಸ್ಪತ್ರೆ, ಭಾರಂಗಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟನೆ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ । ಯಡಿಯೂರಪ್ಪ ಬರ್ತ್ ಡೇ | ಸಿದ್ಧವಾಯ್ತು ಸ್ಪೆಷಲ್ ಸಾಂಗ್, ರಚಿಸಿದ್ದ್ಯಾರು ಗೊತ್ತಾ?

71 ಗ್ರಾಮಗಳಲ್ಲಿ 13.40 ಕೋಟಿ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅಂದಾಜು 54 ಕೋಟಿ ರೂಪಾಯಿ ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ, ವೇ ಬ್ರಿಡ್ಜ್, ಶಾಲಾ ಕೊಠಡಿ, ವಿದ್ಯುತ್ ಉಪ ಕೇಂದ್ರ ಸೇರಿದಂತೆ ಹಲವು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಮೂಲಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ನಗರಾಭಿವೃದ್ಧಿ ಸಚಿವ ಬಸವರಾಜು, ಶಾಸಕ ಕುಮಾರ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!