ವಿಧಾನ ಪರಿಷತ್ ಚುನಾವಣೆ, ಶಿವಮೊಗ್ಗದಲ್ಲಿ ‘ಅರುಣೋದಯ’, ಮುಂದುವರಿದ 2ನೇ ಸಲ ಗೆಲ್ಲುವುದಿಲ್ಲವೆಂಬ ಪರಿಪಾಠ!

 

 

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಅವರು 344 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು `ಕಮಲ’ಕ್ಕೆ ಜೈ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಕಮಲ ಕಲಿಗಳು ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ಮೂಲಕ ಶಿವಮೊಗ್ಗದಲ್ಲಿ ಕಮಲ ಅರಳುವಂತೆ ಮಾಡಿದ್ದಾರೆ. ಒಟ್ಟು 4156 ಮತಗಳಲ್ಲಿ 109 ತರಸ್ಕøತಗೊಂಡರೆ, ಅರುಣ್ ಪರ 2,192 ಮತ ಚಲಾವಣೆಯಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ಅವರು 1,848 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ಜೆಡಿಯು ಅಭ್ಯರ್ಥಿ ಶಶಿಕುಮಾರ್ ಗೌಡ 3, ರವಿ 4 ಮತ ಪಡೆದಿದ್ದಾರೆ.

DS ARUN MLC 1

ಚೊಚ್ಚಲ ಚುನಾವಣೆಯಲ್ಲೇ ಗೆಲುವು

ಪಕ್ಷದ ಪರವಾಗಿ ಸಾಕಷ್ಟು ಕೆಲಸ ಮಾಡಿರುವ ಡಿ.ಎಸ್.ಅರುಣ್ ಅವರಿಗೆ ಇದುವರೆಗೆ ರಾಜಕೀಯವಾಗಿ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ, ಚೊಚ್ಚಲ ಚುನಾವಣೆಯಲ್ಲೇ ಜಯ ಗಳಿಸುವ ಮೂಲಕ ರಾಜಕೀಯ ಜೀವನದ ಮತ್ತೊಂದು ಮಜಲಿಗೆ ಕಾಲಿಟ್ಟಿದ್ದಾರೆ.
ವಿಧಾನ ಪರಿಷತ್ ಮಾಜಿ ಸಭಾಪತಿ, ಬಿಜೆಪಿ ಹಿರಿಯ ನಾಯಕ ಡಿ.ಎಚ್. ಶಂಕರಮೂರ್ತಿ ಅವರ ಪುತ್ರರಾದ ಅರುಣ್ ಮೊದಲ ಬಾರಿಗೆ ವಿಧಾನ ಪರಿಷತ್ ಗೆ ಪ್ರವೇಶಿಸಿದ್ದಾರೆ.
ಈ ಮೂಲಕ ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೊಮ್ಮೆ ಗೆಲ್ಲುವುದಿಲ್ಲ ಎನ್ನುವ ಪರಿಪಾಠ ಈ ಚುನಾವಣೆಯಲ್ಲಿ ಮುಂದುವರಿದಿದೆ.

ಇದರೊಂದಿಗೆ ಹಿಂದೆ ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತಿದ್ದ ಪರಿಪಾಠಕ್ಕೆ ಅರುಣ್ ಬ್ರೇಕ್ ಹಾಕಿದ್ದಾರೆ. ಯಾವುದೇ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿರದ ಅರುಣ್ ಎದುರಿಸಿದ ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಫಲ ನೀಡಿದ ಘಟಾನುಘಟಿಗಳ ಪ್ರಚಾರ
ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಪ್ರಬಲವಾಗಿದೆ. ಶಿವಮೊಗ್ಗ ಜಿಲ್ಲೆ ಸೇರಿದಂತೆ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಬಿಜೆಪಿ ಸಂಘಟಿತ ಪ್ರಚಾರ ನಡೆಸಿತ್ತು. ಅರುಣ್ ಪರವಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಕೆ.ಎಸ್. ಈಶ್ವರಪ್ಪ, ಆರಗ ಜ್ಞಾನೇಂದ್ರ, ವಿಧಾನಪರಿಷತ್ ಸದಸ್ಯರು ಹಾಗೂ ಶಾಸಕರು ಸೇರಿದಂತೆ ಪಕ್ಷದ ನಾಯಕರಿಂದ ಸಂಘಟಿತ ಪ್ರಚಾರ ನಡೆಸಲಾಗಿತ್ತು. ಇದು ಫಲ ನೀಡಿದೆ.

ಎಂಎಲ್ಸಿ ಚುನಾವಣೆಯಲ್ಲಿ ಯಾರಿಗೆಷ್ಟು ಮತ
ಅಭ್ಯರ್ಥಿ ಪಡೆದ ಮತ
ಡಿ.ಎಸ್.ಅರುಣ್  2,192
ಆರ್.ಪ್ರಸನ್ನಕುಮಾರ್ 1,848
ಶಶಿಕುಮಾರ್ ಗೌಡ 3
ಪಿ.ವೈ.ರವಿ 4
ಒಟ್ಟು 4,047

ಆರ್.ಪ್ರಸನ್ನ ಕುಮಾರ್ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು.
ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದೆ ಪಕ್ಷದ ಕಾರ್ಯಕರ್ತರು, ಮುಖಂಡರು ಸೇರಿ ಸಂಭ್ರಮಾಚರಣೆ ಮಾಡಿದರು. ಪಕ್ಷದ ಕಚೇರಿ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

https://www.suddikanaja.com/2021/11/23/political-activity-begins-in-shivamogga-for-mlc-election-nomination-by-candidates/

error: Content is protected !!