ಶಿವಮೊಗ್ಗದಲ್ಲಿ ನಡೆಯಲಿದೆ ಅದ್ದೂರಿ ‘ಕೆಳದಿ ಉತ್ಸವ’

 

 

ಸುದ್ದಿ ಕಣಜ.ಕಾಂ | CITY | RANGAYANA
ಶಿವಮೊಗ್ಗ: ಅಮೃತ ಮಹೋತ್ಸವ ಅಂಗವಾಗಿ ಜಿಲ್ಲೆಯಲ್ಲಿ ‘ಕೆಳದಿ ಉತ್ಸವ’ವನ್ನು ಆಯೋಜಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಘೋಷಿಸಿದರು.
ಶಿವಮೊಗ್ಗ ರಂಗಾಯಣದಲ್ಲಿ ಇತ್ತೀಚೆಗೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಸಹಯೋಗದೊಂದಿಗೆ ಅನಾವರಣಗೊಳಿಸಲಾದ ‘ಮ್ಯೂರಲ್ ಆರ್ಟ್(ಭಿತ್ತಿಚಿತ್ರ)ಗ್ಯಾಲರಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಹೊಸ ಪೀಳಿಗೆಯನ್ನು ರಂಗಭೂಮಿಯ ಕಡೆಗೆ ಸೆಳೆಯುವ ಕಾರ್ಯವನ್ನು ರಂಗಾಯಣಗಳು ಮಾಡಬೇಕು. ಪೈಪೋಟಿಯ ಇಂದಿನ ಯುಗದಲ್ಲಿ ಯುವ ಜನರು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಾಗಿ ಮಾರು ಹೋಗುತ್ತಿದ್ದು, ಅಂತಹ ಯುವ ಜನರಲ್ಲಿ ರಂಗ ಆಸಕ್ತಿ ಮೂಡಿಸುವ ಕಾರ್ಯ ನಡೆಯಬೇಕು. ಅವರಲ್ಲಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಕಾರ್ಯವನ್ನು ರಂಗಾಯಣ ಮಾಡಬೇಕು ಎಂದರು.

ಕಾರಂತರ ನಾಟಕ ರಚನೆಗೆ ಬಜೆಟ್ ನಲ್ಲಿ ಅನುದಾನ
ನಾಟಕ ಅಭಿವ್ಯಕ್ತಿಯ ಅತ್ಯುತ್ತಮ ಮಾಧ್ಯಮವಾಗಿದ್ದು, ಗಾಂಧೀಜಿಯವರು ಸತ್ಯ ಹರಿಶ್ಚಂದ್ರ ನಾಟಕದಿಂದ ಪ್ರಭಾವಿತರಾಗಿದ್ದರು. ಶಿವರಾಮ ಕಾರಂತ ಅವರ ಕಾದಂಬರಿ ಆಧರಿಸಿ ನಾಟಕ ರಚಿಸುವ ಶಿವಮೊಗ್ಗ ರಂಗಾಯಣದ ಪ್ರಸ್ತಾವನೆಯನ್ನು ಮನ್ನಿಸಿ ಮುಂದಿನ ಬಜೆಟ್‍ನಲ್ಲಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸುವರ್ಣ ಸಾಂಸ್ಕøತಿಕ ಭವನದಲ್ಲಿ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿ, ವಿದ್ಯುತ್ ಸ್ವಾವಲಂಬನೆ ಸಾಧಿಸುವ ಪ್ರಸ್ತಾವನೆಯನ್ನು ಸಹ ಅನುಷ್ಟಾನಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಮ್ಯೂರಲ್ ಆರ್ಟ್ ಗ್ಯಾಲರಿ

ಶಿವಮೊಗ್ಗ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕರ್ನಾಟಕ ಚಿತ್ರ ಕಲಾ ಪರಿಷತ್ ಸಹಯೋಗದಲ್ಲಿ 40ಕ್ಕೂ ಅಧಿಕ ಮ್ಯೂರಲ್ ಕಲಾಕೃತಿಗಳನ್ನು ರಚಿಸಲಾಗಿದ್ದು, ಆಕರ್ಷಕವಾಗಿವೆ. ವಿವಿಧ ನಾಟಕಗಳ ದೃಶ್ಯಗಳು, ಸೂತ್ರದ ಗೊಂಬೆಯಾಟ, ವರ್ಲಿ ಪೈಂಟಿಂಗ್ ಕಲಾಕೃತಿಗಳು, ಹತ್ತಾರು ಬಗೆಯ ಮುಖವಾಡಗಳು ಶಿವಮೊಗ್ಗ ರಂಗಾಯಣಕ್ಕೆ ಹೊಸ ರೂಪು ನೀಡಿವೆ. ಬೇರೆ ಯಾವುದೇ ರಂಗಾಯಣಗಳು ಮಾಡದ ಕಾರ್ಯವನ್ನು ಶಿವಮೊಗ್ಗ ರಂಗಾಯಣ ಮಾಡಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಸ್ವಾಗತಿಸಿದರು. ಆಡಳಿತಾಧಿಕಾರಿ ಶಫಿ ಸಾದುದ್ದೀನ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ದತ್ತಾತ್ರಿ, ರಂಗ ಸಮಾಜದ ಸದಸ್ಯ ಹಾಲಸ್ವಾಮಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಉಪಸ್ಥಿತರಿದ್ದರು.

https://www.suddikanaja.com/2021/12/05/fencing-to-the-grave-of-the-descendants-of-keladi-with-police-security-at-new-mandli-at-shivamogga/

error: Content is protected !!