ಮಕ್ಕಳಿಗೆ ಕೋವ್ಯಾಕ್ಸಿನ್, ಶಿವಮೊಗ್ಗದಲ್ಲಿ ಮಾಡಿಕೊಂಡ ಸಿದ್ಧತೆ, ಎಷ್ಟು ದಿನದ ಅಭಿಯಾನ, 2ನೇ ಡೋಸ್ ಯಾವಾಗ, ಇಲ್ಲಿದೆ ಕಂಪ್ಲೀಟ್ ಮಾಹಿತಿ

 

 

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುತ್ತಿರುವ ಬೆನ್ನಲ್ಲೇ 15-18 ವರ್ಷದ ಮಕ್ಕಳಿಗೂ ಕೋವ್ಯಾಕ್ಸಿನ್ ನೀಡಲು ಸರ್ಕಾರ ಮುಂದಾಗಿದೆ. ಅದಕ್ಕಾಗಿ ಶಿವಮೊಗ್ಗದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಜನವರಿ 3 ರಿಂದ 12ರ ವರೆಗೆ 15ರಿಂದ 18 ವರ್ಷದ 83,831 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

ಜಿಲ್ಲೆಯಲ್ಲಿ 35 ಸಾವಿರ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು ಜ.3 ರಂದು ಒಟ್ಟು 74 ಸೈಟ್ ಗಳಲ್ಲಿ ಲಸಿಕಾಕರಣ ನಡೆಯಲಿದೆ. ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರವಾರು ಕ್ರಿಯಾ ಯೋಜನೆಯನ್ನು ತಯಾರಿಸಿದ್ದು, ಈ ಯೋಜನೆಯಂತೆ ಜಿಲ್ಲೆಯ ಎಲ್ಲ ಪ್ರೌಢ ಶಾಲೆ ಮತ್ತು ಕಾಲೇಜುಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಮಕ್ಕಳಲ್ಲಿ ತೊಂದರೆ ಕಂಡುಬಂದರೆ ತುರ್ತುಸೇವೆಗೆ ಆಂಬ್ಯುಲೆನ್ಸ್
ಈ ಲಸಿಕಾಕರಣ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಪ್ರಾಂಶುಪಾಲರು ಕಾರ್ಯ ನಿರ್ವಹಿಸಲಿದ್ದಾರೆ. ಲಸಿಕೆ ನೀಡಿದ ನಂತರ ಮಕ್ಕಳಲ್ಲಿ ಏನಾದರೂ ತೊಂದರೆ ಕಂಡುಬಂದರೆ ಸೂಕ್ತ ಚಿಕಿತ್ಸೆ ನೀಡಲು 5 ಪ್ರಾಥಮಿಕ ಆರೋಗ್ಯಗಳು ಒಳಗೊಂಡಂತೆ ಒಂದು ಆಂಬ್ಯುಲೆನ್ಸ್ ನಿಯೋಜಿಸಲಾಗಿದೆ. ಈ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಲು ಪ್ರಾಥಮಿಕ ಆರೋಗ್ಯ ಕೇಂದ್ರವಾರು ನೋಡಲ್ ಅಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳು ಹಾಗೂ ಶಾಲೆಗಳಲ್ಲಿ ಮಕ್ಕಳ ಜನನ ದೃಢೀಕರಣ ನೋಡಿಕೊಳ್ಳಲು ಒಬ್ಬ ಶಾಲಾ ಶಿಕ್ಷಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.

28 ದಿನಗಳ ಅಂತರದಲ್ಲಿ 2ನೇ ಡೋಸ್

2007ನೇ ಸಾಲು ಮತ್ತು ಜನವರಿ 2007 ರ ಮೊದಲು ಜನಿಸಿರುವ ಮಕ್ಕಳು ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಅರ್ಹರಿರುತ್ತಾರೆ. ಈಗಾಗಲೇ ಚಾಲ್ತಿಯಲ್ಲಿರುವ ಕೋವ್ಯಾಕ್ಸಿನ್ ಲಸಿಕೆಯ 0.5 ಎಂ.ಎಲ್ ಇಂಟ್ರಾಮಸ್ಕುಲರ್ 2 ಡೋಸ್ ಚುಚ್ಚುಮದ್ದನ್ನು 28 ದಿನಗಳ ಅಂತರದಲ್ಲಿ ನೀಡಲಾಗುತ್ತದೆ. ಫಲಾನುಭವಿ ಮಕ್ಕಳು ಸ್ವಂತ ಮೊಬೈಲ್ ಸಂಖ್ಯೆ ಅಥವಾ ಕೋವಿನ್ ನಲ್ಲಿ ಈಗಾಗಲೇ ನೋಂದಣಿಯಾಗಿರುವ ಪೋಷಕರ ಸಂಖ್ಯೆಯಲ್ಲಿ ಮಾಡಿಕೊಳ್ಳಬಹುದು. ಇದು ಯಾವುದೂ ಲಭ್ಯವಿಲ್ಲದಿದ್ದರೆ ಶಾಲೆಯ ಮುಖ್ಯೋಪಾಧ್ಯಾಯರ ಮೊಬೈಲ್ ಸಂಖ್ಯೆಯ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

https://www.suddikanaja.com/2021/05/13/covid-treatment/

error: Content is protected !!