ಬಂಗಾರೇಶ್ ಬದುಕು ಬಂಗಾರಗೊಳಿಸಿದ ಅಡಿಕೆ ಸಂಸ್ಕರಣಾ ಘಟಕ, ಎಕರೆಗೆ ₹4.50 ಲಕ್ಷ‌ ಆದಾಯ ಗಳಿಕೆ

ಸುದ್ದಿ ಕಣಜ.ಕಾಂ | KARNATAKA | POSITIVE NEWS

ಶಿವಮೊಗ್ಗ: ಸರ್ಕಾರದ ಯೋಜನೆಗಳ ಬಗ್ಗೆ ಅರಿವಿಲ್ಲದೆ ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಿರುವ ಬಹಳಷ್ಟು ರೈತರ ನಡುವೆ ಬಂಗಾರೇಶ್ ತೋಟಗಾರಿಕೆ ಇಲಾಖೆಯಿಂದ ಸೂಕ್ತವಾದ ಮಾಹಿತಿ ಪಡೆದು ಅಡಿಕೆ ಸಂಸ್ಕರಣಾ ಘಟಕ ನಿರ್ಮಿಸಿಕೊಳ್ಳುವ ಮೂಲಕ ತಮ್ಮ ಬದುಕನ್ನು ಹಸನಾಗಿಸಿಕೊಂಡು ಅಡಿಕೆ ಕೃಷಿಯಲ್ಲಿ ಯಶಸ್ಸಿನ ಹೆಜ್ಜೆ ಇಟ್ಟಿದ್ದಾರೆ.

ಅಡಿಕೆ ಬೆಳೆಯ ಜೊತೆಗೆ ಮಿಶ್ರ ಬೆಳೆಗಳಾದ ಕಾಳುಮೆಣಸು, ಕೋಕೋ ಏಲಕ್ಕಿ ಮುಂತಾದ ಬೆಳೆಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ನೀಡಲಾಗುತ್ತದೆ. ಬಂಗಾರೇಶ್ ಅವರಿಗೆ 2020-21 ನೇ ಸಾಲಿನಲ್ಲಿ ಶೇ.40 ಸಹಾಯಧನ ಅಂದರೆ ₹7.24 ಲಕ್ಷ ಒದಗಿಸಿರುವುದರಿಂದ ಅವರು ಅಡಿಕೆ ಸಂಸ್ಕರಣಾ ಘಟಕವನ್ನು ನಿರ್ಮಿಸಿಕೊಂಡು ತೋಟಗಾರಿಕೆಯಲ್ಲಿ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗಿದೆ. ತೋಟಗಾರಿಕೆಯಲ್ಲಿ ಆಸಕ್ತಿ ಇರುವ ರೈತರು ಈ ಯೋಜನೆಯ ಉಪಯೋಗ ಪಡೆಯಬಹುದು.

– ಪ್ರಕಾಶ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ

ಕೆ.ವಿ. ಬಂಗಾರೇಶ್ ಅವರು ಸೊರಬ ತಾಲ್ಲೂಕಿನ ಕಸಬಾ ಹೋಬಳಿಯ ಮಾವಲಿ ಗ್ರಾಮದಲ್ಲಿ ನೆಲೆಸಿದ್ದು, 2020-21 ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿಯಲ್ಲಿ ಸಹಾಯಧನ ಪಡೆದುಕೊಂಡು ಅಡಿಕೆ ಸಂಸ್ಕರಣಾ ಘಟಕ ಸ್ಥಾಪಿಸಿದ್ದಾರೆ.

ಅಡಿಕೆ ಸಂಸ್ಕರಣಾ ಘಟಕ ಸ್ಥಾಪಿಸಿ ಹೆಚ್ಚಿನ ಆದಾಯ ಗಳಿಸುತ್ತಿರುವ ಇವರು ಸೊರಬ ತಾಲ್ಲೂಕಿಗೆ ಮಾದರಿ ರೈತರಾಗುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗ ನೀಡಿ ಅವರ ಜೀವನಕ್ಕೂ ಅನುಕೂಲ ಮಾಡಿಕೊಡುತ್ತಿದ್ದಾರೆ.

ತೋಟಗಾರಿಕೆ ಇಲಾಖೆಯಿಂದ ನೆರವು ಪಡೆದುಕೊಂಡು ಮಧ್ಯವರ್ತಿಗಳ ಸಹಾಯವಿಲ್ಲದೇ ಸ್ವಾವಲಂಬಿ ಬದುಕು ರೂಪಿಕೊಂಡಿದ್ದು, ಅವರ ಅಡಿಕೆ ಕೃಷಿಯಲ್ಲಿನ ಆದಾಯ ಇಂದು ದ್ವಿಗುಣವಾಗಿದೆ.

ಎಕರೆಗೆ ₹4.50 ಲಕ್ಷ‌ ಆದಾಯ ಗಳಿಕೆ

ಬೆಳೆದಂತಹ ಅಡಿಕೆ ಫಸಲನ್ನು ಗುತ್ತಿಗೆ ಅಥವಾ ಖೇಣಿ ರೂಪದಲ್ಲಿ ಅಡಿಕೆ ವ್ಯಾಪಾರಸ್ಥರಿಗೆ ಪ್ರತಿ ಎಕರೆಗೆ ₹2.5 ಲಕ್ಷಕ್ಕೆ ನೀಡುತ್ತಿದ್ದರು. ಹೀಗೆ ಮಾಡುವುದರಿಂದ ಅವರಿಗೆ ಆದಾಯದಲ್ಲಿ ನಷ್ಟ ಆಗುತ್ತಿತ್ತು. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಸೊರಬದಲ್ಲಿರುವ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಅಡಿಕೆ ಸಂಸ್ಕರಣಾ ಘಟಕ ಸ್ಥಾಪಿಸುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದುಕೊಂಡು ಇಲಾಖೆಯಿಂದ ₹7.24 ಲಕ್ಷ ಸಹಾಯಧನ ಪಡೆದುಕೊಂಡು ತಮ್ಮ ಸ್ವಂತ ಜಮೀನಿನಲ್ಲೇ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದರು. ಇದರಿಂದಾಗಿ ಬಂಗಾರೇಶ್ ಅವರು ಪ್ರಸ್ತುತ ಅಡಿಕೆಯ ಪ್ರತಿ ಎಕರೆಗೆ ₹4.5 ಲಕ್ಷದಷ್ಟು ಆದಾಯ ಪಡೆಯುತ್ತಿದ್ದಾರೆ.

ತೋಟಗಾರಿಕೆ ಇಲಾಖೆ ನೆರವಿನಿಂದ ಅಡಿಕೆ ಸಂಸ್ಕರಣಾ ಘಟಕವನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಯಿತು. ನನ್ನ ಆದಾಯದ ಸ್ಥಿತಿ ಉತ್ತಮವಾಗಿದ್ದು, ಸಾಕಷ್ಟು ರೈತರು ಅಡಿಕೆ ಸಂಸ್ಕರಣಾ ಘಟಕದ ಬಗ್ಗೆ ಮಾಹಿತಿ ಪಡೆದುಕೊಳ್ಳುವುದಕ್ಕಾಗಿ ನನ್ನ ಬಳಿ ಬರುತ್ತಿದ್ದಾರೆ. ಈ ಯೋಜನೆಯಿಂದ ನನಗೆ ತುಂಬಾ ಉಪಯೋಗವಾಗಿದ್ದು ಸಂತಸ ತಂದಿದೆ. ನನಗೆ ಬದುಕು ಕಟ್ಟಿಕೊಳ್ಳಲು ಸಹಕರಿಸಿದ ತೋಟಗಾರಿಕೆ ಇಲಾಖೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ.

– ಬಂಗಾರೇಶ್, ಫಲಾನುಭವಿ

ಈ ಸಂಸ್ಕರಣಾ ಘಟಕದಿಂದಾಗಿ ಅಡಿಕೆ ಫಸಲಿಗೆ ಸಂಬಂಧಿಸಿದ ಎಲ್ಲ ಕೆಲಸ ಕಾರ್ಯಗಳು ಒಂದೇ ಸೂರಿನಡಿಯಲ್ಲಿ ನಿರ್ವಹಣೆ ಆಗುತ್ತಿರುವುದರಿಂದ ಬಂಗಾರೇಶ್‍ರಿಗೆ ಅಡಿಕೆ ಬೆಳೆ ಜೊತೆಗೆ ಮಿಶ್ರ ಬೆಳೆಗಳಾದ ಕಾಳುಮೆಣಸು ಮತ್ತು ಕೋಕೋಗಳನ್ನು ಬೆಳೆಯಲು ಸಹಾಯವಾಗಿದೆ. ಇಂದು ಬಂಗಾರೇಶ್ ಹೊರಗಿನಿಂದ ಗೊಬ್ಬರವನ್ನು ಖರೀದಿ ಮಾಡುವ ಬದಲಾಗಿ ತಮ್ಮಲ್ಲೇ ಇರುವ ಅಡಿಕೆ ಸಂಸ್ಕರಣಾ ಘಟಕದಿಂದ ಸಿಗುವ ಅಡಿಕೆ ಸಿಪ್ಪೆಯನ್ನು ಬಳಸಿಕೊಂಡು ಗೊಬ್ಬರವನ್ನು ತಯಾರಿಸುವ ಯೋಜನೆಯನ್ನು ಕೂಡ ಹಾಕಿಕೊಂಡಿದ್ದಾರೆ. ಸರ್ಕಾರದ ಸವಲತ್ತನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಆದಾಯದಲ್ಲಿ ಪ್ರಗತಿ ಸಾಧಿಸುವ ಮೂಲಕ ಅಡಿಕೆ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಿದ್ದು, ಇತರೆ ರೈತರಿಗೆ ಮಾದರಿಯಾಗಿದ್ದಾರೆ.

Leave a Reply

Your email address will not be published.