ಶಿವಮೊಗ್ಗದಲ್ಲಿ ಮನೆಗಳಿಗೆ ಹಾನಿ, ಹೆಕ್ಟೇರ್ ಗಟ್ಟಲೇ ಕೃಷಿ ಭೂಮಿ ಜಲಾವೃತ

Rain water

 

 

ಸುದ್ದಿ ಕಣಜ.ಕಾಂ | DISTRICT | SHIVAMOGGA RAIN
ಶಿವಮೊಗ್ಗ: ಅಸಾನಿ ಚಂಡಮಾರುತ ಮಲೆನಾಡಿನಾದ್ಯಂತ ಭಾರೀ ಅನಾಹುತವನ್ನೇ‌ ಸೃಷ್ಟಿಸಿದೆ. ಕೆರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಗದ್ದೆಗಳಿಗೆ ನೀರು‌ನುಗ್ಗಿದೆ. ಜತೆಗೆ, ನಗರ ಸೇರಿದಂತೆ ತಾಲೂಕು ಪ್ರದೇಶಗಳಲ್ಲೂ‌‌ ಹಲವು ಮನೆಗಳು ಧರೆಗುರುಳಿವೆ.
17 ಮನೆ ಭಾಗಶಃ ಕುಸಿತ, 1085 ಹೆಕ್ಟೇರ್ ಕೃಷಿ ಬೆಳೆ‌ ಜಲಾವೃತ
ಕಳೆದ 24‌ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸುರಿದಿರುವ ನಿರಂತರ ಮಳೆಯಿಂದಾಗಿ 17 ಮನೆಗಳು ಭಾಗಶಃ ಕುಸಿದಿವೆ. 1085 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳಿಗೆ ಹಾನಿ ಸಂಭವಿಸಿದೆ. 123 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳಿಗೆ ಹಾನಿ ಉಂಟಾಗಿರುವ ಬಗ್ಗೆ ಪ್ರಾಥಮಿಕ ವರದಿಯನ್ನು ಪಡೆಯಲಾಗಿದೆ ಎಂದು‌ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.

VIDEO REPORT

 

ಬೆಳೆ ಹಾನಿ ಕುರಿತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆಯನ್ನು ತಕ್ಷಣ ಕೈಗೊಂಡು ಒಂದೆರಡು ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸಬೇಕು. ವರದಿ ಆಧಾರದಲ್ಲಿ ಬೆಳೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಳೆಯಿಂದಾಗಿ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಮಾನವ ಪ್ರಾಣ ಹಾನಿ ಅಥವಾ ಜಾನುವಾರುಗಳ ಪ್ರಾಣಹಾನಿ ಸಂಭವಿಸಿರುವುದಿಲ್ಲ. ಪ್ರಾಣ ಹಾನಿ ಸಂಭವಿಸಿದ ತಕ್ಷಣ ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ 24 ಗಂಟೆಯ ಒಳಗಾಗಿ ಪರಿಹಾರವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕು. ಮನೆಗಳಿಗೆ ಉಂಟಾಗಿರುವ ಹಾನಿಯನ್ನು ಪರಿಶೀಲಿಸಿ ಆದಷ್ಟು ಬೇಗನೇ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

READ | ಶಿವಮೊಗ್ಗದಲ್ಲಿ‌ ಮುಂದುವರಿದ ಮಳೆ, ಎಲ್ಲೆಲ್ಲಿ ಏನೇನು ಅನಾಹುತ?

ಜಿಲ್ಲಾಧಿಕಾರಿ ನಗರ ಸಂಚಾರ
ಶಿವಮೊಗ್ಗ ನಗರದಲ್ಲಿ ನಿರಂತರ ಮಳೆಯಿಂದಾಗಿ ನೀರು ನುಗ್ಗಿರುವ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಲವು ಕಡೆಗಳಲ್ಲಿ ಚರಂಡಿ ಕಟ್ಟಿಕೊಂಡು, ನೀರು ತುಂಬಿ ಕೃತಕ ನೆರೆ ಉಂಟಾಗಿರುವ ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಲು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಳಜಿ ಕೇಂದ್ರ ಸ್ಥಾಪನೆ
ಶಿವಮೊಗ್ಗ ನಗರದಲ್ಲಿ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿರುವ ಹಿನ್ನೆಲೆಯಲ್ಲಿ 250 ಮಂದಿಗೆ ಕಾಳಜಿ ಕೇಂದ್ರಗಳಲ್ಲಿ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ನೀರು ನುಗ್ಗಬಹುದಾದ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

https://suddikanaja.com/2021/07/23/heavy-rainfall-created-flood-in-shivamogga-district/

Leave a Reply

Your email address will not be published. Required fields are marked *

error: Content is protected !!